ADVERTISEMENT

ಮಾರುಕಟ್ಟೆ ಸ್ಥಳಾಂತರಕ್ಕೆ ವರ್ತಕರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 19:43 IST
Last Updated 21 ಏಪ್ರಿಲ್ 2021, 19:43 IST
ಕೆ.ಆರ್.ಮಾರುಕಟ್ಟೆ ಹೊರಾಂಗಣದ ಚಿತ್ರಣ
ಕೆ.ಆರ್.ಮಾರುಕಟ್ಟೆ ಹೊರಾಂಗಣದ ಚಿತ್ರಣ   

ಬೆಂಗಳೂರು: ಕೋವಿಡ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮಾರುಕಟ್ಟೆಗಳ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿದ್ದು, ಅದಕ್ಕೆ ಸಿದ್ಧತೆಗಳನ್ನು ಆರಂಭಿಸಿದೆ. ಆದರೆ, ಅಗತ್ಯ ಎನಿಸಿದರೆ ಒಂದಷ್ಟು ದಿನ ಮಾರುಕಟ್ಟೆ ಮುಚ್ಚುತ್ತೇವೆ, ಸ್ಥಳಾಂತರ ಸಾಧ್ಯವಿಲ್ಲ ಎಂದು ವರ್ತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಶವಂತಪುರ ಎಪಿಎಂಸಿಯಲ್ಲಿನ ತರಕಾರಿ ಮಾರುಕಟ್ಟೆ ಕಳೆದ ವರ್ಷವೇ ದಾಸನಪುರ ಎಪಿಎಂಸಿಗೆ ಸ್ಥಳಾಂತರ ಆಗಿದೆ. ಈರುಳ್ಳಿ, ಬೆಳ್ಳುಳ್ಳಿ ಮತ್ತು ಆಲೂಗಡ್ಡೆ ವಹಿವಾಟು ಕೆಲ ದಿನಗಳ ಕಾಲ ದಾಸನಪುರಕ್ಕೆ ಸ್ಥಳಾಂತರ ಆಗಿತ್ತು. ಸದ್ಯ ಯಶವಂತಪುರಕ್ಕೆ ಮರಳಿದೆ.

ಈಗ ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಮಾರುಕಟ್ಟೆಗಳನ್ನು ಸ್ಥಳಾಂತರಿಸಲು ಬಿಬಿಎಂಪಿ ಮತ್ತು ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಕಲಾಸಿಪಾಳ್ಯ ಮತ್ತು ಯಶವಂತಪುರ ಮಾರುಕಟ್ಟೆಗಳಿಗೆ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದಾರೆ.

ADVERTISEMENT

‘ಯಶವಂತಪುರ ಎಪಿಎಂಸಿಯಲ್ಲಿನ ಈರುಳ್ಳಿ, ಬೆಳ್ಳುಳ್ಳಿ ಮತ್ತು ಆಲೂಗಡ್ಡೆ ವ್ಯಾಪಾರದ ಮೇಲಷ್ಟೇ ಅಧಿಕಾರಿಗಳಿಗೆ ಕಣ್ಣಿಟ್ಟಿದ್ದಾರೆ. ರೈತರೊಂದಿಗೆ ನೇರ ಸಂಬಂಧ ಇರುವ ಕಾರಣ ಈ ಮಾರುಕಟ್ಟೆಯನ್ನು ಇಲ್ಲೇ ಉಳಿಸಬೇಕು’ ಎಂದು ವರ್ತಕರು ಒತ್ತಾಯಿಸಿದ್ದಾರೆ.

‘ದಾಸನಪುರ ಮಾರುಕಟ್ಟೆಯಲ್ಲಿ ಕಳೆದ ವರ್ಷ ಹಲವು ಸವಾಲುಗಳನ್ನು ಎದುರಿಸಿ ಸಂಕಷ್ಟ ಅನುಭವಿಸಿದ್ದೇವೆ. ವ್ಯಾಪಾರ ವಹಿವಾಟು ನಷ್ಟವಾಗಿ ವರ್ತಕರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ. ದಾಸ್ತಾನಿಡುವ ಪದಾರ್ಥಗಳಿಗೆ ಭದ್ರತೆ ಇಲ್ಲ. ಉತ್ತಮ ಸಾರಿಗೆ ವ್ಯವಸ್ಥೆ ಇಲ್ಲ. ಸಮೀಪದಲ್ಲಿ ಬ್ಯಾಂಕ್‌ ಕೂಡ ಇಲ್ಲದ ಕಾರಣ ಹಣ ಜೇಬಿನಲ್ಲಿಟ್ಟುಕೊಂಡು ಓಡಾಡುವುದೂ ಕಷ್ಟ’ ಎಂದು ಯಶವಂತಪುರ ಆಲೂಗಡ್ಡೆ, ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯಶಂಕರ್ ಹೇಳಿದರು.

‘ಸ್ಥಳಾಂತರ ಒಂದನ್ನು ಬಿಟ್ಟು ಸರ್ಕಾರ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೆ ನಾವು ಬದ್ಧರಾಗಿದ್ದೇವೆ. ನಿಗದಿತ ಸಮಯದಲ್ಲೇ ವಹಿವಾಟು ನಡೆಸುತ್ತೇವೆ’ ಎಂದು ಭರವಸೆ ನೀಡಿದರು.

ಕಲಾಸಿಪಾಳ್ಯ ಮಾರುಕಟ್ಟೆಯನ್ನೂ ಕಳೆದ ವರ್ಷದಂತೆ ಎಲೆಕ್ಟ್ರಾನಿಕ್ ಸಿಟಿ ಸಮೀಪಕ್ಕೆ ಸ್ಥಳಾಂತರ ಮಾಡಲು ತಯಾರಿ ನಡೆಯುತ್ತಿದೆ. ಇದಕ್ಕೆ ವರ್ತಕರಿಂದ ವಿರೋಧ ವ್ಯಕ್ತವಾಗಿದೆ.

‘ಸರ್ಕಾರ ಹೇಳಿದ ಸಮಯದಲ್ಲಷ್ಟೆ ಅಂಗಡಿಗಳನ್ನು ತೆರೆದು ವಹಿವಾಟು ನಡೆಸುತ್ತೇವೆ. ಅಗತ್ಯ ಎನಿಸಿದರೆ ಕೆಲ ದಿನಗಳ ಮಟ್ಟಿಗೆ ಸಂಪೂರ್ಣ ಬಂದ್ ಮಾಡುತ್ತೇವೆ. ಅದರೆ, ಸ್ಥಳಾಂತರ ಮಾತ್ರ ಸಾಧ್ಯವಿಲ್ಲ’ ಎಂದು ಕಲಾಸಿಪಾಳ್ಯ ತರಕಾರಿ ವರ್ತಕರ ಸಂಘದ ಅಧ್ಕಕ್ಷ ಆರ್.ವಿ.ಗೋಪಿ ತಿಳಿಸಿದರು.

ಕೆ.ಆರ್‌.ಮಾರುಕಟ್ಟೆ ಸ್ಥಳಾಂತರ ಅಸಾಧ್ಯ

‘ಕೆ.ಆರ್.ಮಾರುಕಟ್ಟೆಯಲ್ಲಿ 25 ರೀತಿಯ ಅಂಗಡಿ ಮುಂಗಟ್ಟುಗಳಿವೆ. ಅವುಗಳನ್ನು ಸ್ಥಳಾಂತರ ಮಾಡುವುದು ಅಸಾಧ್ಯದ ಮಾತು’ ಎಂದು ಕೆ.ಆರ್.ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ದಿವಾಕರ್ ಹೇಳುತ್ತಾರೆ.

‘ಕೆ.ಆರ್. ಮಾರುಕಟ್ಟೆ ಒಂದರಲ್ಲೇ 2,200 ಅಂಗಡಿಗಳಿವೆ. ಹೂವು, ಹಣ್ಣು, ತರಕಾರಿ, ತೆಂಗಿನಕಾಯಿ, ಬಾಳೆ ಎಲೆ, ವೀಳ್ಯದೆಲೆ, ಕುಂಕುಮ, ಅಲ್ಯೂಮಿನಿಯಂ ಪಾತ್ರೆ, ಗ್ಯಾಸ್ ಸ್ಟವ್, ಸ್ಟೀಲ್ ಪಾತ್ರೆ, ‍ದಿನಸಿ ಅಂಗಡಿ, ಬಟ್ಟೆ, ಪೇಪರ್, ಪುಸ್ತಕ, ಪ್ಲಾಸ್ಟಿಕ್ ಅಂಗಡಿಗಳು, ಕಾಂಡಿಮೆಂಟ್‌ ಸ್ಟೋರ್‌ಗಳು, ಮೀನು, ಮಾಂಸದ ಅಂಗಡಿಗಳು ಇಲ್ಲಿವೆ. ಇವೆಲ್ಲವನ್ನೂ ಎಲ್ಲಿಗೆ ಮತ್ತು ಹೇಗೆ ಸ್ಥಳಾಂತರ ಮಾಡಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

‘ಮಾರುಕಟ್ಟೆಯ ಹೊರಾಂಗಣದಲ್ಲಿನ ಫುಟ್‌ಪಾತ್ ಅಂಗಡಿಗಳನ್ನು ನೋಡಿ ಅದನ್ನೇ ಕೆ.ಆರ್.ಮಾರುಕಟ್ಟೆ ಎಂದು ಭಾವಿಸಲಾಗಿದೆ. ಮಾರುಕಟ್ಟೆಯ ಒಳಗೆ ಜನರಿಲ್ಲದೆ ಕಾಯುವ ಪರಿಸ್ಥಿತಿ ಇದೆ. ಹೀಗಾಗಿ, ಮಾರುಕಟ್ಟೆ ಸ್ಥಳಾಂತರ ನಿರ್ಧಾರವನ್ನು ಬಿಬಿಎಂಪಿ ಮಾಡಬಾರದು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.