ADVERTISEMENT

ವೈಮಾನಿಕ ಪ್ರದರ್ಶನಕ್ಕೆ ಮುನ್ನ ಕಾಮಗಾರಿ ಮುಗಿಸಿ

ಥಣಿಸಂದ್ರ ಮುಖ್ಯರಸ್ತೆ ವೈಟ್‌ಟಾಪಿಂಗ್– ಬಿಬಿಎಂಪಿ ಆಡಳಿತಾಧಿಕಾರಿ ಗಡುವು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 2:14 IST
Last Updated 2 ಡಿಸೆಂಬರ್ 2020, 2:14 IST
ಧಣಿಸಂದ್ರ ಮುಖ್ಯರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ
ಧಣಿಸಂದ್ರ ಮುಖ್ಯರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ   

ಬೆಂಗಳೂರು: ಬಿಬಿಎಂಪಿಯು ಥಣಿಸಂದ್ರ ಮುಖ್ಯ ರಸ್ತೆಯಲ್ಲಿ (ನಾಗವಾರ ಜಂಕ್ಷನ್ ನಿಂದ ಬಾಗಲೂರು ಕ್ರಾಸ್ ವರೆಗೆ) ಅನುಷ್ಠಾನಗೊಳಿಸುತ್ತಿರುವ ವೈಟ್‌ಟಾಪಿಂಗ್ ಕಾಮಗಾರಿಯನ್ನು 2021ರ ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಫೆಬ್ರುವರಿ ಮೊದಲ ವಾರ ನಡೆಯುವ ವೈಮಾನಿಕ ಪ್ರದರ್ಶನಕ್ಕೆ ಮುನ್ನ ಈ ರಸ್ತೆ ವಾಹನ ಸಂಚಾರಕ್ಕೆ ಸಜ್ಜುಗೊಳ್ಳಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಅಧಿಕಾರಿಗಳಿಗೆ ಸೂಚಿಸಿದರು.

ಥಣಿಸಂದ್ರ ಮುಖ್ಯರಸ್ತೆಯು ಹೊರವರ್ತುಲ ರಸ್ತೆಯಿಂದ ಬಾಗಲೂರು ಮುಖ್ಯರಸ್ತೆಗೆ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಪರ್ಯಾಯ ಮಾರ್ಗವಾಗಿದೆ. 9.5 ಕಿ.ಮೀ ಉದ್ದದ ಈ ರಸ್ತೆಯ ಒಂದು ಪಾರ್ಶ್ವದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿ, ಮತ್ತೊಂದು ಪಾರ್ಶ್ವದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಐದು ದಿನದಲ್ಲಿ 1.2 ಕಿ.ಮೀ ರಸ್ತೆ ಕಾಮಗಾರಿ ಮುಗಿದಿದೆ. ಈ ಕಾಮಗಾರಿಯನ್ನು ಆಡಳಿತಾಧಿಕಾರಿ ಮಂಗಳವಾರ ಪರಿಶೀಲನೆ ನಡೆಸಿದರು.

ಪಾಲಿಕೆಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಥಣಿಸಂದ್ರ ಮುಖ್ಯರಸ್ತೆಯ ಪಕ್ಕದಲ್ಲಿ 1,400 ಮಿ.ಮೀ ಸುತ್ತಳತೆಯ ಕೊಳವೆಮಾರ್ಗವನ್ನು ಅಳವಡಿಸಲಾಗುತ್ತಿದೆ. ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬಾಕಿ ಇರುವ ಸಣ್ಣ ಪುಟ್ಟ ಕೆಲಸಗಳನ್ನೂ ತ್ವರಿತವಾಗಿ ಪೂರ್ಣಗೊಳಿಸುವಂತೆ ಆಡಳಿತಾಧಿಕಾರಿಯವರು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

‘ರಾಷ್ಟ್ರೋತ್ಥಾನ ಜಂಕ್ಷನ್ ಬಳಿ ಬೆಸ್ಕಾಂ ವತಿಯಿಂದ 11 ಕೆ.ವಿ ಸಾಮರ್ಥ್ಯದ ಕೇಬಲ್‌ ಅಳವಡಿಸುವ ಕಾರ್ಯ ಬಾಕಿ ಇದೆ’ ಎಂದು ಅಧಿಕಾರಿಯೊಬ್ಬರು ಗಮನಕ್ಕೆ ತಂದರು. ಬೆಸ್ಕಾಂ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಆಡಳಿತಾಧಿಕಾರಿ ಶೀಘ್ರವೇ ಕಾಮಗಾರಿ ಮುಗಿಸುವಂತೆ ನಿರ್ದೇಶನ ನೀಡಿದರು.

ಮೇಲ್ಸೇತುವೆ ತಪಾಸಣೆ

ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ರಾಷ್ಟ್ರೋತ್ಥಾನ ಜಂಕ್ಷನ್ ಬಳಿ ಸಿಗ್ನಲ್ ರಹಿತ ವಾಹನ ಸಂಚಾರ ಒದಗಿಸಲು 459 ಮೀಟರ್ ಉದ್ದದ 4 ಪಥಗಳ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಮುಕ್ತಾಯದ ಹಂತದಲ್ಲಿರುವ ಈ ಕಾಮಗಾರಿಯನ್ನ್ನೂ ಆಡಳಿತಾಧಿಕಾರಿ ಪರಿಶೀಲಿಸಿದರು. ಮೇಲ್ಸೇತುವೆಯ ಡಾಂಬರೀಕರಣ, ರಸ್ತೆವಿಭಜಕಗಳ ಅಭಿವೃದ್ಧಿ ಹಾಗೂ ಸರ್ವಿಸ್‌ ರಸ್ತೆಗಳ ಕೆಲಸಗಳನ್ನು 20 ದಿನಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.