ADVERTISEMENT

ಲಂಚ ಪಡೆದ ಪಿಡಿಒ ಎಸಿಬಿ ಬಲೆಗೆ

ಕಷ್ಟ ಹೇಳಿದರೂ ಕರಗದ ಅಧಿಕಾರಿ!

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 20:04 IST
Last Updated 4 ಜನವರಿ 2020, 20:04 IST

ಬೆಂಗಳೂರು: ಕಷ್ಟ ಹೇಳಿಕೊಂಡರೂ ಕೇಳದೇ ವಿದ್ಯಾರ್ಥಿಯೊಬ್ಬನ ಬಳಿ ಲಂಚ ಪಡೆದ ಆರೋಪದ ಮೇಲೆ ಚೊಕ್ಕಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನರ್ಮದಾ ಹಾಗೂ ಕಚೇರಿ ಟೈಪಿಸ್ಟ್‌ ಮುನಿರಾಜು ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಹೊಸಕೋಟೆ ತಾಲೂಕು ಚೋಳಪ್ಪನಹಳ್ಳಿಯ ಭಾಸ್ಕರ್‌ ಎಂಬುವರು ತಮ್ಮ ತಾಯಿ ರಾಜಮ್ಮ ಅವರ ಹೆಸರಿನಲ್ಲಿ ಗ್ರಾಮದಲ್ಲಿರುವ 38/36 ಅಡಿ ವಿಸ್ತೀರ್ಣದ ಮನೆಗೆ ಇ–ಖಾತೆ ಮಾಡಲು ಅಕ್ಟೋಬರ್‌ 5ರಂದು ಅರ್ಜಿ ಸಲ್ಲಿಸಿದ್ದರು. ಆದರೆ, ಪಿಡಿಒ ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದರು.

ಡಿಸೆಂಬರ್‌ 27ರಂದು ಪಂಚಾಯ್ತಿ ಕಚೇರಿಗೆ ಹೋಗಿ ಪಿಡಿಒ ಅವರನ್ನು ವಿಚಾರಿಸಿದಾಗ ₹ 8,000 ಲಂಚ ಕೊಡುವಂತೆ ಕೇಳಿದರು. ‘ನಾನು ವಿದ್ಯಾರ್ಥಿ, ತಂದೆಗೆ ಸಂಬಳ ಕಡಿಮೆ. ಇಷ್ಟೊಂದು ಹಣ ಹೊಂದಿಸುವುದು ಕಷ್ಟ ಆಗುತ್ತದೆ’ ಎಂದು ವಿದ್ಯಾರ್ಥಿ ಹೇಳಿದರೂ ನರ್ಮದಾ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ ಎಂದು ಎಸಿಬಿ ಮೂಲಗಳು ತಿಳಿಸಿವೆ.

ADVERTISEMENT

ಪುನಃ ಡಿಸೆಂಬರ್‌ 30ರಂದು ಭಾಸ್ಕರ್‌ ₹ 2000 ಹಣವನ್ನು ತೆಗೆದುಕೊಂಡು ಪಿಡಿಒ ಅವರನ್ನು ಭೇಟಿ ಆದರು. ಅದನ್ನು ಟೈಪಿಸ್ಟ್‌ ಮುನಿರಾಜುಗೆ ನೀಡುವಂತೆ ಅವರು ಹೇಳಿದ್ದರು. ಹಣ ತೆಗೆದುಕೊಂಡ ಮುನಿರಾಜು ಮಿಕ್ಕಿದ್ದನ್ನು ತಂದುಕೊಡುವಂತೆ ತಾಕೀತು ಮಾಡಿದ್ದರು.

ಆನಂತರ, ವಿದ್ಯಾರ್ಥಿ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಶುಕ್ರವಾರ ಫಿರ್ಯಾದಿ ಮಿಕ್ಕ ಹಣ ಕೊಡುವಾಗ ಎಸಿಬಿ ಪೊಲೀಸರು ದಾಳಿ ನಡೆಸಿದರು. ನರ್ಮದಾ ಹಾಗೂ ಮುನಿರಾಜು ಅವರನ್ನು ಬಂಧಿಸಲಾಗಿದ್ದು,ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.