ADVERTISEMENT

ವಿಷಕಾರಿ ಅನಿಲ ಸೇವಿಸಿ30 ಮಂದಿ ಅಸ್ವಸ್ಥ

‘ಮೋಲೆಕ್ಸ್ ಇಂಡಿಯಾ’ ಕಂಪನಿಯಲ್ಲಿ ಅವಘಡ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:43 IST
Last Updated 16 ಆಗಸ್ಟ್ 2019, 19:43 IST

ಬೆಂಗಳೂರು: ಮಹದೇವಪುರ ಸಮೀಪದ ದೇವಸಂದ್ರದಲ್ಲಿರುವ ‘ಮೋಲೆಕ್ಸ್ ಇಂಡಿಯಾ’ ಕಂಪನಿಯಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿದೆ ಎನ್ನಲಾಗಿದ್ದು, ಅನಿಲ ಸೇವಿಸಿ 30 ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.

‘ಕಂಪನಿ ಮಾಲೀಕರು ಹಾಗೂ ಆಡಳಿತ ವರ್ಗದವರು ಕೆಲಸದ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಅವರ ನಿರ್ಲಕ್ಷ್ಯದಿಂದ ಅನಿಲ ಸೋರಿಕೆಯಾಗಿ ಉಸಿರಾಟಕ್ಕೆ ತೊಂದರೆ ಉಂಟಾಗಿ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ’ ಎಂದು ಆರೋಪಿಸಿ ಕಂಪನಿಯ ಟ್ರೈನಿ ಲೈನ್ ಲೀಡರ್ ಆರ್‌. ನಿತಿನ್ ಎಂಬುವವರು ದೂರು ನೀಡಿದ್ದಾರೆ.

‘ಕಂಪನಿ ಮಾಲೀಕರು ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಕಂಪನಿಯ ಪ್ರಧಾನ ಕಚೇರಿ ಅಮೆರಿಕದಲ್ಲಿದೆ. ಸ್ಥಳೀಯ ನಿರ್ದೇಶಕರನ್ನು ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ವಾಂತಿ, ಗಂಟಲು ಉರಿ: ‘ಕಂಪನಿಯ ಮೂರು ಮಹಡಿಯಲ್ಲಿ ಇದೇ 14ರಂದು ಮಧ್ಯಾಹ್ನ 2 ಗಂಟೆ ಪಾಳಿಯಲ್ಲಿ 300 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ನೆಲಮಹಡಿಯಲ್ಲಿ 30 ಜನರಿದ್ದರು. ಅದೇ ನೆಲಮಹಡಿಯಲ್ಲೇ ವಿಷಕಾರಿ ಅನಿಲ ಸೋರಿಕೆಯಾಗಿ ಎಲ್ಲೆಡೆ ಹರಡಿತ್ತು’ ಎಂದು ದೂರುದಾರ ಆರ್‌. ನಿತಿನ್ ಹೇಳಿದ್ದಾರೆ.

‘ಉಸಿರಾಟಕ್ಕೆ ತೊಂದರೆಯಾಗಿ ಕೆಲಸಗಾರರು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಹತ್ತಿರದ ಸಾಯಿಕೃಪಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಆಸ್ಪತ್ರೆ, ಕೊಲಂಬಿಯಾ ಆಸ್ಪತ್ರೆ ಹಾಗೂ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವರು ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ. ನಾನೂ ಅಸ್ವಸ್ಥಗೊಂಡಿದ್ದೆ’ ಎಂದು ಅವರು ತಿಳಿಸಿದ್ದಾರೆ.

ಕಾರಣ ಪತ್ತೆಗೆ ತನಿಖೆ

‘ಉದ್ಯೋಗಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು, ಕಂಪನಿಗೆ ಬೀಗ ಹಾಕಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಎಲೆಕ್ಟ್ರಾನಿಕ್‌ ಸೇರಿದಂತೆ ಹಲವು ವಸ್ತುಗಳನ್ನು ಇಲ್ಲಿ ತಯಾರಿಸಲಾಗುತ್ತಿತ್ತು. ಯಾವ ಅನಿಲ ಸೋರಿಕೆಯಾಗಿತ್ತು ಎಂಬುದು ಗೊತ್ತಾಗಿಲ್ಲ. ಅದನ್ನು ತಿಳಿದುಕೊಳ್ಳಲು ತನಿಖೆ ಮುಂದುವರಿದಿದೆ’ ಎಂದು ಮಹದೇವಪುರ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.