ADVERTISEMENT

ಆಧಾರ್‌ ಕಾರ್ಡ್‌ಗಾಗಿ ಕಾಯುವ ಸಂಕಟ

ಬೆಂಗಳೂರು ಒನ್‌ ಕೇಂದ್ರಗಳ ಮುಂದೆ ಸರದಿ ಸಾಲು * ಬೆಳಿಗ್ಗೆ 7ರಿಂದಲೇ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 15:35 IST
Last Updated 16 ಡಿಸೆಂಬರ್ 2020, 15:35 IST
ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿರುವ ಬೆಂಗಳೂರು ಒನ್‌ ಆಧಾರ್‌ ನೋಂದಣಿ ಕೇಂದ್ರದ ಮುಂದೆ, ಆಧಾರ್‌ ತಿದ್ದುಪಡಿ ಹಾಗೂ ನೋಂದಣಿಗಾಗಿ ಕಾಯುತ್ತಿರುವ ಜನರು– ಪ್ರಜಾವಾಣಿ ಚಿತ್ರ/ ಇರ್ಷಾದ್ ಮಹಮ್ಮದ್
ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿರುವ ಬೆಂಗಳೂರು ಒನ್‌ ಆಧಾರ್‌ ನೋಂದಣಿ ಕೇಂದ್ರದ ಮುಂದೆ, ಆಧಾರ್‌ ತಿದ್ದುಪಡಿ ಹಾಗೂ ನೋಂದಣಿಗಾಗಿ ಕಾಯುತ್ತಿರುವ ಜನರು– ಪ್ರಜಾವಾಣಿ ಚಿತ್ರ/ ಇರ್ಷಾದ್ ಮಹಮ್ಮದ್   

ಬೆಂಗಳೂರು: ಆಧಾರ್‌ ಗುರುತಿನ ಚೀಟಿ ತಿದ್ದುಪಡಿಗಾಗಿ, ಕಳೆದುಹೋದ ಯುಐಡಿ ಪತ್ತೆ ಹಚ್ಚಲು, ವಿಳಾಸ ಬದಲಾವಣೆ ಮತ್ತಿತರ ಉದ್ದೇಶಕ್ಕೆ ನಗರದ ಬೆಂಗಳೂರು ಒನ್‌ ಕೇಂದ್ರಗಳ ಎದುರು ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಈ ಕೇಂದ್ರಗಳು ತೆರೆಯುವ ಒಂದು ತಾಸು ಮೊದಲೇ ಟೋಕನ್‌ಗಾಗಿ ಸರತಿಯಲ್ಲಿ ಜನರು ನಿಲ್ಲುತ್ತಿದ್ದಾರೆ.

‘ಬೆಳಿಗ್ಗೆ 8.30ಕ್ಕೆ ಕೇಂದ್ರ ತೆರೆಯಲಿದೆ. ಆದರೆ, ನಮ್ಮ ಪಾಳಿ ಬರುವುದರೊಳಗೆ ಮಧ್ಯಾಹ್ನವಾಗುತ್ತದೆ. ಬೆಳಿಗ್ಗೆ 7ಕ್ಕೇ ಬಂದು ನಿಂತರೆ ಮಾತ್ರ ಬೇಗ ಟೋಕನ್ ಸಿಗುತ್ತದೆ’ ಎಂದು ಜೆ.ಪಿ. ನಗರದ ಬೆಂಗಳೂರು ಒನ್ ಕೇಂದ್ರದ ಬಳಿ ಬುಧವಾರ ಸರದಿಯಲ್ಲಿ ನಿಂತಿದ್ದ ರಮೇಶ್‌ ಹೇಳಿದರು.

‘ಅಂಚೆ ಇಲಾಖೆಗೆ ಹೋದರೆ ಬ್ಯಾಂಕ್‌ಗೆ ಹೋಗಿ ಎನ್ನುತ್ತಾರೆ. ಅಲ್ಲಿಗೆ ಹೋದರೆ ಬಿಎಸ್‌ಎನ್‌ಎಲ್‌ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಹೋಗಿ ಎಂದು ಕಳಿಸುತ್ತಾರೆ. ಇಲ್ಲಿಗೆ ಬಂದರೆ ದೊಡ್ಡ ಸಾಲು ಇರುತ್ತದೆ. ಹೆಚ್ಚು ಕೌಂಟರ್‌ಗಳನ್ನು ತೆರೆದರೆ ಕಾಯುವುದು ತಪ್ಪುತ್ತದೆ’ ಎಂದು ಅವರು ಹೇಳಿದರು.

ADVERTISEMENT

‘ಸರ್ಕಾರದ ಅನೇಕ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್‌ ಕಡ್ಡಾಯ ಆಗಿದೆ. ಹೆಸರು ಮತ್ತು ವಿಳಾಸದಲ್ಲಿ ತಪ್ಪಿದ್ದರೆ ಯಾರೂ ಅವುಗಳನ್ನು ತೆಗೆದುಕೊಳ್ಳುವುದಿಲ್ಲ. ಆಧಾರ್‌ ಕಾರ್ಡ್‌ಗೆ ಮೊಬೈಲ್‌ ದೂರವಾಣಿ ಸಂಖ್ಯೆಯನ್ನು ಜೋಡಿಸಿದರೆ ಮಾತ್ರ ಒಟಿಪಿ ಬರುತ್ತದೆ. ನಂತರವೇ ಎಲ್ಲ ಸೇವೆ ಸಿಗುತ್ತದೆ. ಆನ್‌ಲೈನ್‌ನಲ್ಲಿಯೇ ಇದನ್ನು ಸರಿ ಪಡಿಸಿಕೊಳ್ಳಲು ನಮಗೆ ತಿಳಿಯುವುದಿಲ್ಲ’ ಎಂದು ಜಯನಗರದ ಬೆಂಗಳೂರು ಒನ್ ಕೇಂದ್ರದ ಎದುರು ನಿಂತಿದ್ದ ಬಸವರಾಜ್ ಹೇಳಿದರು.

‘ಕೆಲವು ಕೇಂದ್ರಗಳಿಗೆ ತೆರಳಿದರೆ ಸರ್ವರ್‌ ನಿಧಾನ ಇದೆ ಎನ್ನುತ್ತಾರೆ. ಬೇರೆ ಕೆಲಸ ಬಿಟ್ಟು ಕಾಯುವುದೇ ದೊಡ್ಡ ತೊಡಕಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಒಂದು ಕೇಂದ್ರದಲ್ಲಿ ದಿನಕ್ಕೆ 50 ಜನರಿಗೆ ಮಾತ್ರ ಟೋಕನ್‌ ಕೊಡುತ್ತಿದ್ದಾರೆ. ಈ ಸಂಖ್ಯೆಯನ್ನೂ ಹೆಚ್ಚಿಸಬೇಕು. ಬ್ಯಾಂಕ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದರೆ, ಆಧಾರ್‌ ತಿದ್ದುಪಡಿಗೆ ಬಂದವರಿಗೆ ಮರುದಿನ ಬನ್ನಿ ಎಂದು ಹೇಳಿ ಕಳಿಸುತ್ತಾರೆ’ ಎಂದು ಭಾಗ್ಯಲಕ್ಷ್ಮಿ ಹೇಳಿದರು.

‘ಕಾಲೇಜು, ಶಾಲೆಯ ಪ್ರವೇಶದ ನಂತರ ವಿದ್ಯಾರ್ಥಿ ವೇತನ, ಹಾಸ್ಟೆಲ್‌ ಸೇರ್ಪಡೆ ಮತ್ತಿತರ ಉದ್ದೇಶಕ್ಕೂ ಆಧಾರ್‌ ಗುರುತಿನ ಚೀಟಿ ಬೇಕಾಗಿದೆ. ಜನರಿಗೆ ಬೇಗ ಗುರುತಿನ ಚೀಟಿ ಸಿಗುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂದು ಯುವಕ ಗಿರೀಶ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.