ADVERTISEMENT

ಅಕ್ರಮ ವಲಸಿಗರಿಗೆ ರಾಹುಲ್‌ ಏಜೆಂಟ್‌

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಆರೋಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 20:00 IST
Last Updated 10 ಏಪ್ರಿಲ್ 2019, 20:00 IST
ವಿದ್ಯಾರ್ಥಿಗಳೊಂದಿಗೆ ಮುರಳೀಧರ ರಾವ್‌ ಚರ್ಚೆ ನಡೆಸಿದರು. ಬಿಜೆಪಿ ರಾಜ್ಯ ಘಟಕದ ಸಹ ವಕ್ತಾರ ಎ.ಎಚ್‌.ಆನಂದ್‌ ಹಾಗೂ ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ವಿದ್ಯಾರ್ಥಿಗಳೊಂದಿಗೆ ಮುರಳೀಧರ ರಾವ್‌ ಚರ್ಚೆ ನಡೆಸಿದರು. ಬಿಜೆಪಿ ರಾಜ್ಯ ಘಟಕದ ಸಹ ವಕ್ತಾರ ಎ.ಎಚ್‌.ಆನಂದ್‌ ಹಾಗೂ ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಆ ಪಕ್ಷದನಾಯಕರು ಬಾಂಗ್ಲಾದೇಶದ ಅಕ್ರಮ ವಲಸಿಗರ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಆರೋಪಿಸಿದರು.

ಬಿಜೆಪಿ ರಾಜ್ಯ ಘಟಕದ ಆಶ್ರಯದಲ್ಲಿ ನಗರದಲ್ಲಿ ಬುಧವಾರ ನಡೆದ ‘ರಾಜ್ಯದ ಯುವಕರು, ಐಟಿ ಉದ್ಯೋಗಿಗಳು, ವಿವಿಧ ಕ್ಷೇತ್ರಗಳ ಜತೆಗಿನ ಸಂವಾದ’ದಲ್ಲಿ ಅವರು ಮಾತನಾಡಿದರು.

‘ರೋಹಿಂಗ್ಯಾ ಮುಸ್ಲಿಮರು ಭಾರತದಲ್ಲಿ ವಾಸಿಸಬಹುದು ಹಾಗೂ ಇಲ್ಲಿನ ನಾಗರಿಕತೆ ಪಡೆಯಬಹುದು ಎಂದು ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಅವರ ಪರವಾಗಿ ಹೋರಾಟ ನಡೆಸುವುದಿದ್ದರೆ ರಾಹುಲ್‌ ಬರ್ಮಾಕ್ಕೆ ಹೋಗಲಿ’ ಎಂದು ಸವಾಲು ಎಸೆದರು. ‘ಅವರು ಮತ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಸ್ಥಳೀಯರ ಮತ ಪಡೆಯುವ ಶಕ್ತಿ ಇಲ್ಲ’ ಎಂದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಸ್ಲಿಂ ರಾಷ್ಟ್ರಗಳು ಸಹ ವಿವಾದರಹಿತ ನಾಯಕ ಎಂದು ಒಪ್ಪಿಕೊಂಡಿವೆ. ಭಾರತದ ಮುಸ್ಲಿಮರು ಸಹ ಮೋದಿ ಅವರನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ವಿರೋಧ ಪಕ್ಷಗಳು ಅಪಪ್ರಚಾರದಲ್ಲಿ ತೊಡಗಿವೆ’ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಯಲ್ಲಿ 10ರಿಂದ 40 ಸ್ಥಾನಗಳನ್ನಷ್ಟೇ ಪಡೆಯಲಿರುವ ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಅವರಂತಹ ನಾಯಕರು ಸಹ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಕನಿಷ್ಠ 15 ನಾಯಕರು ‍ಪ್ರಧಾನಿಯಾಗಲು ಹವಣಿಸುತ್ತಿದ್ದಾರೆ. ಆದರೆ, ದೇಶ ಸುಭದ್ರವಾಗಿರಬೇಕು. ಹೀಗಾಗಿ, ಸುಭದ್ರ ಸರ್ಕಾರ ಬೇಕು. ದೇಶದ ಪರ ಗಟ್ಟಿ ನಿರ್ಧಾರ ಕೈಗೊಳ್ಳುವ ನಾಯಕರು ಬೇಕು. ಅಂತಹ ನಾಯಕತ್ವ ಗುಣ ಇರುವುದು ಮೋದಿ ಅವರಿಗೆ ಮಾತ್ರ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.