ADVERTISEMENT

ಸಿಸಿಬಿ ಬಲೆಗೆ ರೈಲ್ವೆ ಅಧಿಕಾರಿ

ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ಹಲವರಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 18:58 IST
Last Updated 23 ಮಾರ್ಚ್ 2019, 18:58 IST
ಗೋವಿಂದರಾಜು
ಗೋವಿಂದರಾಜು   

ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ್ದ ನೈರುತ್ಯ ರೈಲ್ವೆ ವಿಭಾಗದ ಡೆಪ್ಯೂಟಿ ಚೀಫ್ ಟಿಕೆಟ್ ಇನ್‌ಸ್ಪೆಕ್ಟರ್ ಎಂ.ಗೋವಿಂದರಾಜು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸಿ.ಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯದ ಗೋವಿಂದರಾಜು, 2018ರಲ್ಲಿ ರೈಲ್ವೆ ಇಲಾಖೆ ಸೇರಿದ್ದ. ಈತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕಿಂಗ್‌ಪಿನ್ ಶಿವಕುಮಾರಯ್ಯ ಅಲಿಯಾಸ್ ‘ಗುರೂಜಿ’ಯ ಆಪ್ತ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ನನಗೆ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳ ಪರಿಚಯವಿದೆ. ಹಣ ಕೊಟ್ಟರೆ ರೈಲ್ವೆ, ಬಿಎಂಟಿಸಿ, ಬಿಎಂಟಿಎಫ್ ಕಚೇರಿಗಳಲ್ಲಿ ಕೆಲಸ ಕೊಡಿಸುತ್ತೇನೆ’ ಎಂದು ನಂಬಿಸಿ ಪರಿಚಿತ ಯುವಕರಿಂದ ಹಣ ಪಡೆಯುತ್ತಿದ್ದ ಗೋವಿಂದರಾಜು ಅವನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಗೋವಿಂದರಾಜು ವಿರುದ್ಧ ಈವರೆಗೆ 14 ಮಂದಿ ದೂರು ಕೊಟ್ಟಿದ್ದಾರೆ. ಒಬ್ಬೊಬ್ಬರಿಂದ ₹ 1 ಲಕ್ಷದಿಂದ ₹ 2 ಲಕ್ಷದವರೆಗೆ ಸುಲಿಗೆ ಮಾಡಿದ್ದಾನೆ’ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದರು.

‘ಗುರೂಜಿ’ಯ ಏಜೆಂಟ್

ಶಿವಕುಮಾರಯ್ಯನ ಜತೆ ಏಳು ವರ್ಷಗಳಿಂದ ಸಂಪರ್ಕದಲ್ಲಿದ್ದ ಗೋವಿಂದರಾಜು, ಪ್ರಶ್ನೆಪತ್ರಿಕೆಗಳ ಖರೀದಿಗೆ ಅಭ್ಯರ್ಥಿಗಳನ್ನು ಒದಗಿಸುವ ಏಜೆಂಟ್‌ನಂತೆ ಕೆಲಸ ಮಾಡುತ್ತಿದ್ದ.

‘ರಾಜ್ಯದ ವಿವಿಧೆಡೆ ಟ್ಯುಟೋರಿಯಲ್‌ಗಳನ್ನು ತೆರದಿದ್ದ ಶಿವಕುಮಾರಯ್ಯ, ಪಿಯುಸಿ ಹಾಗೂ ಕೆಲ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಕದ್ದು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ. ಅಭ್ಯರ್ಥಿಗಳನ್ನು ಹುಡುಕಿಕೊಂಡು ಬರಲೆಂದೇ ನೂರಾರು ಏಜೆಂಟ್‌ಗಳನ್ನು ಇಟ್ಟುಕೊಂಡಿದ್ದ. ಆ ಪೈಕಿ ಗೋವಿಂದರಾಜು ಕೂಡ ಒಬ್ಬ. ಆದರೆ, ಕಾನ್‌ಸ್ಟೆಬಲ್ ಪರೀಕ್ಷಾ ಅಕ್ರಮದಲ್ಲಿ ಈತನ ಪಾತ್ರ ಕಂಡು ಬಂದಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.