ADVERTISEMENT

ನಗರದಲ್ಲಿ ದಿನಪೂರ್ತಿ ತುಂತುರು ಮಳೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 19:02 IST
Last Updated 23 ನವೆಂಬರ್ 2018, 19:02 IST
ಪ್ಲಾಸ್ಟಿಕ್‌ ಬ್ಯಾನರ್‌ ಹೊದ್ದು ವ್ಯಕ್ತಿಗಳಿಬ್ಬರು ತುಂತುರು ಮಳೆಯಲ್ಲಿ ಸಾಗಿದರು 
ಪ್ಲಾಸ್ಟಿಕ್‌ ಬ್ಯಾನರ್‌ ಹೊದ್ದು ವ್ಯಕ್ತಿಗಳಿಬ್ಬರು ತುಂತುರು ಮಳೆಯಲ್ಲಿ ಸಾಗಿದರು    

ಬೆಂಗಳೂರು: ನಗರದ ಬಹುತೇಕ ಪ್ರದೇಶಗಳಲ್ಲಿ ಶುಕ್ರವಾರ ಬೆಳಗಿನ ಜಾವದಿಂದ ತಡರಾತ್ರಿಯವರೆಗೂ ತುಂತುರು ಮಳೆ ಸುರಿಯಿತು. ಮಳೆಯ ಸಿಂಚನದಲ್ಲಿ ನಗರವಾಸಿಗಳು ಮಿಂದರು.

ಮುಂಜಾವಿನಿಂದಲೇ ಮೋಡಕವಿದ ವಾತಾವರಣ ಇತ್ತು. ಬೀಳುತ್ತಿದ್ದ ಜಿಟಿ–ಜಿಟಿ ಮಳೆ ಹನಿಗಳಿಗೆ ಮೈಯೊಡ್ಡುತ್ತ ಕೆಲಸದ ಸ್ಥಳಗಳಿಗೆ ಜನರು ತೆರಳುತ್ತಿದ್ದ ದೃಶ್ಯ ಬೆಳಿಗ್ಗೆ ಸಾಮಾನ್ಯವಾಗಿತ್ತು. ಯಲಹಂಕದ ಬಾಗಲೂರು, ಬೊಮ್ಮನಹಳ್ಳಿ, ಜ್ಞಾನಭಾರತಿ, ಕೆಂಗೇರಿ, ರಾಜರಾಜೇಶ್ವರಿ ನಗರ, ಬಸವನಗುಡಿಯಲ್ಲಿ ಸಂಜೆ ಕೆಲಹೊತ್ತು ಜೋರು ಮಳೆ ಸುರಿಯಿತು.

ಬಾಗಲೂರು ಮುಖ್ಯರಸ್ತೆಯ ಎಸ್‌ಎಲ್‌ವಿ ಲೇಕ್‌ ವೀವ್‌ ಅಪಾರ್ಟ್‌ಮೆಂಟ್‌ನ ನೆಲಮಹಡಿಗೆ ನೀರು ನುಗ್ಗಿತ್ತು. ಎಚ್‌ಆರ್‌ಬಿಆರ್‌ ಬಡಾವಣೆಯಲ್ಲಿ ವಿದ್ಯುತ್‌ ತಂತಿ ಕಡಿತಗೊಂಡು ಹುಡುಗನೊಬ್ಬನಿಗೆ ಗಾಯವಾಗಿದೆ.

ADVERTISEMENT

ಸೀಲ್ಕ್‌ಬೋರ್ಡ್‌ನ 36ನೇ ಮುಖ್ಯರಸ್ತೆಯ ಇಂಡಿಯನ್‌ ಆಯಿಲ್‌ ಪೆಟ್ರೊಲ್‌ ಬಂಕ್‌, ಮಹಾಲಕ್ಷ್ಮೀ ಬಡಾವಣೆ, ಜೆ.ಪಿ.ನಗರ 3ನೇ ಹಂತದಲ್ಲಿ ತಲಾ ಒಂದು ಮರ ಗಾಳಿಯ ರಭಸಕ್ಕೆ ಉರುಳಿ ಬಿದ್ದಿದ್ದವು. ರಾತ್ರಿ ಹನ್ನೊಂದರ ಹೊತ್ತಿಗೆ ಅವುಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.

ಮಳೆ ಪ್ರಮಾಣ: ‘ಬೊಮ್ಮನಹಳ್ಳಿ,ದೊರೆಸಾನಿಪಾಳ್ಯದಲ್ಲಿ ತಲಾ 2.7 ಸೆಂ.ಮೀ., ಕೆಂಗೇರಿಯಲ್ಲಿ 2.6, ಕೋಡಿಗೆಹಳ್ಳಿಯಲ್ಲಿ 2.2, ರಾಜರಾಜೇಶ್ವರಿ ನಗರ, ಗೋಪಾಲಪುರದಲ್ಲಿ ತಲಾ 1.8, ದಾಸನಪುರದಲ್ಲಿ 1.3 ಸೆಂ.ಮೀ. ಮಳೆಯಾಗಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.