ADVERTISEMENT

ಸ್ನೇಹಿತನ ಕೊಂದು, ಠಾಣೆಗೆ ಮೃತದೇಹ ತಂದ

ನಂಜನಗೂಡಿನಿಂದ ಕರೆತಂದು ಕೊಲೆ: ಪೊಲೀಸರಿಗೆ ಶರಣಾದ ಆರೋಪಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 21:41 IST
Last Updated 22 ನವೆಂಬರ್ 2022, 21:41 IST
ರಾಜಶೇಖರ್
ರಾಜಶೇಖರ್   

ಬೆಂಗಳೂರು: ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದರೆಂಬ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಆರೋಪಿ ಎಂ. ರಾಜಶೇಖರ್ (31), ತಮ್ಮದೇ ಕಾರಿನಲ್ಲಿ ಮೃತದೇಹವನ್ನು ರಾಮಮೂರ್ತಿನಗರ ಠಾಣೆಗೆ ತಂದು ಪೊಲೀಸರಿಗೆ ಶರಣಾಗಿದ್ದಾರೆ.

‘ಜಯಂತಿನಗರದ ನಿವಾಸಿ ರಾಜಶೇಖರ್, ತನ್ನ ಸ್ನೇಹಿತನಾಗಿದ್ದ ನಂಜನಗೂಡು ಹಿಮನಗುಂಡಿ ಗ್ರಾಮದ ಮಹೇಶಪ್ಪ (49) ಅವರನ್ನು ರಾಡ್‌ನಿಂಡ ಹೊಡೆದು ಕೊಲೆ ಮಾಡಿದ್ದಾನೆ. ಠಾಣೆಗೆ ಬಂದು ಶರಣಾಗಿದ್ದ ರಾಜಶೇಖರ್‌ನನ್ನು ಬಂಧಿಸಿ, ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಿವಿಧ ಯೋಜನೆಯಡಿ ಸಾಲ ಕೊಡಿಸುವುದಾಗಿ ಹೇಳಿದ್ದ ಮಹೇಶಪ್ಪ, ಲಕ್ಷಾಂತರ ರೂಪಾಯಿ ಪಡೆದಿದ್ದ. ಸಾಲ ಕೊಡಿಸದೇ ವಂಚಿಸಿದ್ದ. ಕೋಪಗೊಂಡು ಕೊಲೆ ಮಾಡಿದ್ದೇನೆ’ ಎಂದು ರಾಜಶೇಖರ್ ಹೇಳುತ್ತಿದ್ದಾನೆ. ಈತನ ಹೇಳಿಕೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬೇರೆ ಕಾರಣವಿರಬಹುದೆಂಬ ಅನುಮಾನದಡಿ ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಮನೆ ಅಡವಿಟ್ಟು ಹಣ ನೀಡಿದ್ದ: ‘ಸೊಸೈಟಿ, ಬ್ಯಾಂಕ್‌ ಹಾಗೂ ಇತರೆ ಹಣಕಾಸು ಸಂಸ್ಥೆಗಳಲ್ಲಿ ಪರಿಚಯಸ್ಥರಿದ್ದಾರೆಂದು ಮಹೇಶಪ್ಪ ಹೇಳಿಕೊಳ್ಳುತ್ತಿದ್ದ. ಕಮಿಷನ್ ರೂಪದಲ್ಲಿ ಮುಂಗಡವಾಗಿ ಹಣ ನೀಡಿದರೆ, ಸಾಲ ಮಂಜೂರು ಮಾಡಿಸುವುದಾಗಿ ತಿಳಿಸುತ್ತಿದ್ದ. ಇದನ್ನು ನಂಬಿ ಹಲವರು ಹಣ ಕೊಟ್ಟು ವಂಚನೆಗೀಡಾಗಿದ್ದರೆಂಬುದು ಗೊತ್ತಾಗಿದೆ‘ ಎಂದು ಪೊಲೀಸರು ಹೇಳಿದರು.

‘ಮಹೇಶಪ್ಪ ಹಾಗೂ ರಾಜಶೇಖರ್, 13 ವರ್ಷಗಳಿಂದ ಸ್ನೇಹಿತರಾಗಿದ್ದರು. ಆಗಾಗ ಭೇಟಿಯಾಗುತ್ತಿದ್ದರು. ಮೆಕ್ಯಾನಿಕ್ ಆಗಿದ್ದ ರಾಜಶೇಖರ್ ಹಾಗೂ ಅವರ ತಾಯಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದೇ ಕಾರಣಕ್ಕೆ ಸಾಲ ಕೊಡಿಸುವಂತೆ ಮಹೇಶಪ್ಪ ಅವರನ್ನು ಕೋರಿದ್ದರು.’

‘ಸಾಲ ಕೊಡಿಸುವುದಾಗಿ ಹೇಳಿದ್ದ ಮಹೇಶಪ್ಪ, ರಾಜಶೇಖರ್ ಹಾಗೂ ಅವರ ತಾಯಿಯಿಂದ ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಪಡೆದಿದ್ದ. ಮನೆ ಅಡವಿಟ್ಟು ರಾಜಶೇಖರ್ ಹಣ ನೀಡಿದ್ದರು. ಹಲವು ದಿನವಾದರೂ ಸಾಲ ಕೊಡಿಸದಿದ್ದರಿಂದ ರಾಜಶೇಖರ್ ಬೇಸತ್ತಿದ್ದರು. ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

ಮನೆಯಿಂದ ಕರೆತಂದು ಕೊಲೆ: ‘ಮಹೇಶಪ್ಪ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ರಾಜಶೇಖರ್, ನಂಜನಗೂಡು ಹಿಮನಗುಂಡಿ ಗ್ರಾಮಕ್ಕೆ ಹೋಗಿದ್ದರು. ಸಾಲ ಮಂಜೂರು ಮಾಡಿಸಲು ಮತ್ತಷ್ಟು ಹಣ ನೀಡುವುದಾಗಿ ಹೇಳಿ ಮಹೇಶಪ್ಪ ಅವರನ್ನು ತನ್ನದೇ ಕಾರಿನಲ್ಲಿ ಬೆಂಗಳೂರಿಗೆ ಸೋಮವಾರ ಕರೆದುಕೊಂಡು ಬಂದಿದ್ದರು’ ಎಂದು ಪೊಲೀಸರು ಹೇಳಿದರು.

‘ಆವಲಹಳ್ಳಿ ಬಳಿ ಕಾರು ನಿಲ್ಲಿಸಿ, ಇಬ್ಬರೂ ಮಾತನಾಡುತ್ತಿದ್ದರು. ಜಗಳವೂ ಆರಂಭವಾಗಿತ್ತು. ಇದೇ ಸಂದರ್ಭದಲ್ಲೇ ರಾಜಶೇಖರ್, ರಾಡ್‌ನಿಂದ ಮಹೇಶಪ್ಪ ತಲೆಗೆ ಹೊಡೆದಿದ್ದರು. ತೀವ್ರ ರಕ್ತಸ್ರಾವವಾಗಿ ಮಹೇಶಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದು ತಿಳಿಸಿದರು.

‘ಮೃತದೇಹವನ್ನು ಕಾರಿನಲ್ಲಿರಿಸಿಕೊಂಡು ಸೋಮವಾರ ತಡರಾತ್ರಿ ಠಾಣೆಗೆ ಬಂದಿದ್ದ ರಾಜಶೇಖರ್, ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಶರಣಾಗಿದ್ದ. ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರು, ರಾಜಶೇಖರ್ ಅವರನ್ನು ವಶಕ್ಕೆ ಪಡೆದು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.