ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 19:56 IST
Last Updated 31 ಮಾರ್ಚ್ 2019, 19:56 IST

ಬೆಂಗಳೂರು: ಹದಿನೈದು ವರ್ಷದ ಬಾಲಕಿಯನ್ನು ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಎಸಗಿದ್ದ ಅಪರಾಧಿ ಶರವಣ (32) ಎಂಬಾತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನಗರದ 71ನೇ ಸಿಸಿಎಚ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

‘ಅಪರಾಧಿಯು ಶಿಕ್ಷೆ ಅನುಭವಿಸುವುದರ ಜೊತೆಗೆ ₹20 ಸಾವಿರ ದಂಡವನ್ನೂ ಪಾವತಿ ಮಾಡಬೇಕು. ಅದರಲ್ಲಿ ₹10 ಸಾವಿರವನ್ನು ಸಂತ್ರಸ್ತೆಗೆ ನೀಡಬೇಕು’ ಎಂದು ನ್ಯಾಯಾಧೀಶ ಮೋಹನ್ ಪ್ರಭು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ವಿದ್ಯಾರಣ್ಯ‍ಪುರ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಬಾಲಕಿ, 2014ರ ಡಿಸೆಂಬರ್ 16ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಶಾಲೆಗೆ ಹೊರಟಿದ್ದಳು. ಆಕೆಯನ್ನು ಅಡ್ಡಗಟ್ಟಿದ್ದ ಶರವಣ, ಕೈ ಹಿಡಿದು ಎಳೆದಾಡಿದ್ದ. ನಂತರ ಅಪಹರಿಸಿದ್ದ.

ADVERTISEMENT

ತನ್ನ ಮನೆಗೆ ಬಾಲಕಿಯನ್ನು ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟಿದ್ದ ಶರವಣ, ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಆ ಸಂಬಂಧ ಬಾಲಕಿಯ ಪೋಷಕರು ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಹಾಗೂ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಶರವಣ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಎಸಿಪಿ ಸಿದ್ದಮಲ್ಲಪ್ಪ, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ.ಜೆ.ಮೀನಾಕುಮಾರಿ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.