ADVERTISEMENT

ಟೆಕಿ ಮೇಲೆ ಅತ್ಯಾಚಾರ; ಚೆನ್ನೈ ಯುವಕನಿಗೆ ಶೋಧ

​ಪ್ರಜಾವಾಣಿ ವಾರ್ತೆ
Published 21 ಮೇ 2019, 19:46 IST
Last Updated 21 ಮೇ 2019, 19:46 IST

ಬೆಂಗಳೂರು: ‘ಪ್ರೀತಿಸುವ ನಾಟಕವಾಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡ ಅರುಣ್ (32) ಎಂಬಾತ, ಈಗ ಮದುವೆಯಾಗದೆ ವಂಚಿಸಿದ್ದಾನೆ’ ಎಂದು ಆರೋಪಿಸಿ ನಗರದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಬಸವನಗುಡಿ ಠಾಣೆಗೆ ಸೋಮವಾರ ದೂರು ಕೊಟ್ಟಿದ್ದಾರೆ.

‘ಮದುವೆ ಮಾತುಕತೆ ನೆಪದಲ್ಲಿ ನನ್ನನ್ನು ಇದೇ ಮಾರ್ಚ್ 17 ಹಾಗೂ 31ರಂದು ಬಸವನಗುಡಿಯ ಸನ್ಮಾನ್ ಲಾಡ್ಜ್‌ಗೆ ಕರೆಸಿಕೊಂಡಿದ್ದ ಅರುಣ್, ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಹೀಗಾಗಿ ಅತ್ಯಾಚಾರ (ಐಪಿಸಿ 376) ಹಾಗೂ ವಂಚನೆ (420) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯ ಬಂಧನಕ್ಕೆ ಚೆನ್ನೈ ಪೊಲೀಸರ ನೆರವು ಕೋರಿರುವುದಾಗಿ ಬಸವನಗುಡಿ ಪೊಲೀಸರು ಹೇಳಿದ್ದಾರೆ.

ದೂರಿನ ವಿವರ: ‘2013–14ರಲ್ಲಿ ಚೆನ್ನೈನ ಕಂಪನಿಗೆ ಸಂದರ್ಶನಕ್ಕೆ ಹೋಗಿದ್ದಾಗ ಅಲ್ಲಿ ಅರುಣ್‌ನ ಪರಿಚಯವಾಗಿತ್ತು. ಆಗಿನಿಂದ ಇಬ್ಬರೂ ಒಳ್ಳೆಯ ಸ್ನೇಹಿತರಂತೆ ಇದ್ದೆವು. ನಿತ್ಯ ಆತ ಫೋನ್, ಮೆಸೇಜ್ ಮಾಡುತ್ತ ಸಲುಗೆಯಿಂದಲೇ ಇದ್ದ. ಆದರೆ, ಇದೇ ಜನವರಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡ. ನಾನೂ ಆ ಪ್ರೀತಿಯನ್ನು ಒಪ್ಪಿಕೊಂಡಿದ್ದೆ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ನನ್ನನ್ನು ನೇರವಾಗಿ ಭೇಟಿಯಾಗಲೆಂದು ಅರುಣ್ ಮಾರ್ಚ್ ಮೊದಲ ವಾರದಲ್ಲಿ ನಗರಕ್ಕೆ ಬಂದಿದ್ದ. ಆಗ ನಾವಿಬ್ಬರೂ ಲಾಲ್‌ಬಾಗ್, ಕಬ್ಬನ್‌ಪಾರ್ಕ್‌, ದೇವಸ್ಥಾನಗಳು ಸೇರಿದಂತೆ ನಗರದ ವಿವಿಧೆಡೆ ಸುತ್ತಾಡಿದ್ದೆವು. ಮೇ 17ರಂದು ಕರೆ ಮಾಡಿದ ಆತ, ಮದುವೆ ಮಾತುಕತೆ ಬಗ್ಗೆ ಮಾತನಾಡಲು ಸನ್ಮಾನ್ ಲಾಡ್ಜ್‌ಗೆ ಬರುವಂತೆ ಹೇಳಿದ್ದ.’

‘ಆತನ ಮಾತನ್ನು ನಂಬಿ ಲಾಡ್ಜ್‌ಗೆ ಹೋದಾಗ, ‘ನಾವಿಬ್ಬರೂ ಮದುವೆ ಆಗುವವರು. ಈ ದಿನ ನನ್ನೊಂದಿಗೆ ಸಹಕರಿಸು’ ಎಂದು ಕೇಳಿಕೊಂಡ. ಒಪ್ಪದಿದ್ದಾಗ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ. ಹೇಗಿದ್ದರೂ ಮದುವೆ ಆಗುತ್ತಾನೆಂದು ನಾನೂ ಸುಮ್ಮನಾಗಿದ್ದೆ. ಮಾ. 31ರಂದು ಪುನಃ ಅದೇ ರೀತಿ ನಡೆಯಿತು.’

‘ಆನಂತರ ಚೆನ್ನೈಗೆ ಮರಳಿದ ಅರುಣ್, ಮತ್ತೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಂಡು ಓಡಾಡುತ್ತಿದ್ದಾನೆ. ಹುಡುಕಿಕೊಂಡು ಮನೆಗೆ ಹೋದರೆ, ಆತನ ತಂದೆ ನನಗೇ ಬೈದು ಕಳುಹಿಸಿದ್ದಾರೆ. ಹೀಗಾಗಿ, ನೀವೇ ನ್ಯಾಯ ಕೊಡಿಸಬೇಕು’ ಎಂದು ಸಂತ್ರಸ್ತೆ ಪೊಲೀಸರನ್ನು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.