ADVERTISEMENT

ರಘುಮೂರ್ತಿ ಅಮಾನತಿಗೆ ಶಿಫಾರಸು

17 ಎಕರೆ 35 ಗುಂಟೆ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿ l ತಹಶೀಲ್ದಾರ್‌ ವಿರುದ್ಧ ಸರ್ಕಾರಕ್ಕೆ ಡಿ.ಸಿ ವರದಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 20:34 IST
Last Updated 29 ಸೆಪ್ಟೆಂಬರ್ 2020, 20:34 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು: ಮೆಟ್ರೊ ಯೋಜನೆಯ ಪರಿಹಾರಕ್ಕಾಗಿ ₹100 ಕೋಟಿ ಮೌಲ್ಯದ 17 ಎಕರೆ 35 ಗುಂಟೆ ಸರ್ಕಾರಿ ಜಾಗಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಪ್ರಕರಣದಲ್ಲಿ ಯಲಹಂಕ ತಹಶೀಲ್ದಾರ್‌ ರಘುಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಶಿಫಾರಸು ಮಾಡಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರು ಉತ್ತರ ವಿಶೇಷ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್‌ ಅವರು ಈ ದಾಖಲೆಗಳು ಬೋಗಸ್‌ ಎಂದು ಸೆಪ್ಟೆಂಬರ್‌ 24 ಆದೇಶ ಹೊರಡಿಸಿದ್ದರು. ಬಾಲ್‌ ಪೆನ್‌ನಲ್ಲಿ ದಾಖಲೆಗಳನ್ನು ತಿದ್ದಲಾಗಿದೆ ಎಂದೂ ಆದೇಶದಲ್ಲಿ ಉಲ್ಲೇಖಿಸಿದ್ದರು. ನಕಲಿ ದಾಖಲೆ ಸೃಷ್ಟಿಸಿ ಹಕ್ಕು ಸ್ಥಾಪಿಸಿರುವ ಭಾಗ್ಯಮ್ಮ, ಕೆಂಚಣ್ಣ, ಸುಬ್ರಮಣಿ, ಶಾಂತಮ್ಮ, ಬಸಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಬೇಕು ಎಂದು ಸೂಚಿಸಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿರುವ ರಘುಮೂರ್ತಿ, ತಹಶೀಲ್ದಾರ್ ಕಚೇರಿಯ ಇತರ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದ್ದರು.ಈ ಕುರಿತು ’ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ‘ನೂರು ಕೋಟಿ ಪರಿಹಾರಕ್ಕೆ ಬಾಲ್‌ಪೆನ್‌ ಕರಾಮತ್ತು!’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್‌ ಅವರಿಗೆ ಸೋಮವಾರ ವರದಿ ಸಲ್ಲಿಸಿರುವ ಜಿಲ್ಲಾಧಿಕಾರಿ, ‘ಸರ್ಕಾರದ ಬೆಲೆಬಾಳುವ ಆಸ್ತಿಯನ್ನು ಉದ್ದೇಶಪೂರ್ವಕವಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುವ ಕ್ರಮ ಕ್ರಿಮಿನಲ್‌ ಅಪರಾಧದ ಸ್ವರೂಪದ್ದು. ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕೃತ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ 10 (1) ರಡಿ ಸರ್ಕಾರಿ ನೌಕರರ ಘನತೆಗೆ ತಕ್ಕುದ್ದಲ್ಲದ ಕೆಲಸದಲ್ಲಿ ಭಾಗಿಯಾಗಿರುವ ಕಾರಣದಿಂದ ರಘುಮೂರ್ತಿ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಬೇಕು’ ಎಂದು ಶಿಫಾರಸು ಮಾಡಿದ್ದಾರೆ. ’ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರ ನೌಕರರನ್ನು ಗುರುತಿಸಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲು ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಅವರಿಗೆ ಸೂಚಿಸಲಾಗಿದೆ‘ ಎಂದೂ ತಿಳಿಸಿದ್ದಾರೆ.

ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನಮ್ಮ ಮೆಟ್ರೊ’ ಸಂಪರ್ಕ ಕಲ್ಪಿಸಲು ಭೂಸ್ವಾಧೀನ ಪ್ರಕ್ರಿಯೆ
ಗಳು ಆರಂಭವಾಗಿವೆ. ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಶೆಟ್ಟಿಗೆರೆ ಗ್ರಾಮದ ಮೂಲಕ ಮೆಟ್ರೊ ಮಾರ್ಗ ಹೋಗುತ್ತದೆ. ಬೆಂಗಳೂರು ಮೆಟ್ರೊ ರೈಲು ನಿಗಮದಿಂದ ಭೂಪರಿಹಾರ ಪಡೆಯಲು ನಕಲಿ ದಾಖಲೆ ಸೃಷ್ಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.