ADVERTISEMENT

ಮಾರಕಾಸ್ತ್ರಗಳಿಂದ ಹಲ್ಲೆ: ರೌಡಿಶೀಟರ್ ಕ್ಯಾಟ್ ಮಂಜ ಸಹಚರರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 20:04 IST
Last Updated 14 ಆಗಸ್ಟ್ 2019, 20:04 IST

ಬೆಂಗಳೂರು: ಹಳೇ ದ್ವೇಷದ ಕಾರಣಕ್ಕೆ ಮೂವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ತಂಡದ ಆರು ಮಂದಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಸಂಪಿಗೆಹಳ್ಳಿ ಅಗ್ರಹಾರ ಲೇಔಟ್‍ನ ನಿವಾಸಿ ರೌಡಿಶೀಟರ್ ಕ್ಯಾಟ್ ಮಂಜ (32), ಶಲೀಲ್ (19), ದರ್ಶನ್ (22) ಪ್ರೇಮ್ ಕುಮಾರ್ (22) ಚೇತನ್ (21) ಮತ್ತು ಸುನೀಲ್ (23) ಬಂಧಿತರು.

ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಯಲಹಂಕದ ಮಾರಮ್ಮ ದೇವಸ್ಥಾನ ಬಳಿಯ ನಿವಾಸಿಗಳ ಮನೆಗೆ ನುಗ್ಗಿ ಆರೋಪಿಗಳು ಪುಂಡಾಟಿಕೆ ನಡೆಸಿದ್ದರು. ಇಲ್ಲಿನ ವಿಜಯ್, ಯೋಗೇಶ್ ಮತ್ತು ನವೀನ್ ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.

ADVERTISEMENT

ರೌಡಿಶೀಟರ್ ಲಕ್ಷ್ಮಣ, ಭರತ್‍ ಮತ್ತು ಅವರ ಸಹಚರರು ಮಾರುತಿನಗರದಲ್ಲಿ ಕ್ಯಾಟ್ ಮಂಜನ ಕಾರನ್ನು ಅಡ್ಡಗಟ್ಟಿ ಇತ್ತೀಚೆಗೆ ಗಲಾಟೆ ಮಾಡಿದ್ದರು. ಈ ವಿಷಯಕ್ಕೆ ದ್ವೇಷ ಹೊಂದಿದ್ದ ಕ್ಯಾಟ್ ಮಂಜ, ತನ್ನ ಸಹಚರರ ಜತೆಗೂಡಿ ಲಕ್ಷ್ಮಣ ಮತ್ತು ಭರತನ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ಶನಿವಾರ ಸಂಜೆ ಕಂಠಪೂರ್ತಿ ಕುಡಿದು ಮಾರಕಾಸ್ತ್ರಗಳೊಂದಿಗೆ ಲಕ್ಷ್ಮಣ ನೆಲೆಸಿದ್ದ ಮಾರಮ್ಮ ದೇವಸ್ಥಾನದ ನೀರಿನ ಟ್ಯಾಂಕ್ ಬಳಿಗೆ ಕ್ಯಾಟ್‌ ಮಂಜ ಮತ್ತು ಆತನ ಸಹಚರರು ಹೋಗಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಲಕ್ಷ್ಮಣ ಮತ್ತು ಆತನ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿತ್ತು. ಇದರಿಂದ ಕೋಪಗೊಂಡ ಕ್ಯಾಟ್ ಮಂಜ ಮತ್ತು ಆತನ ಸಹಚರರು ಸ್ಥಳೀಯ ನಿವಾಸಿಗಳ ಮೇಲೆ ಹಲ್ಲೆ ಮಾಡಿದ್ದರು. ಅಲ್ಲದೆ, ಮನೆಯ ಮುಂದೆ ನಿಲ್ಲಿಸಿದ್ದ ಏಳು ಕಾರು ಹಾಗೂ ಬೈಕ್‍ಗಳನ್ನು ಹಾನಿಗೊಳಿಸಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.