ADVERTISEMENT

ಉಳ್ಳವರ ಪರವಾದ ನೂತನ ಶಿಕ್ಷಣ ನೀತಿ: ಬಿ. ಶ್ರೀಪಾದ್‌ ಭಟ್‌

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 2:31 IST
Last Updated 24 ಆಗಸ್ಟ್ 2021, 2:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಸರ್ಕಾರ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಸಮಾನ ಶಿಕ್ಷಣಕ್ಕೆ ಪೂರಕವಾಗಿಲ್ಲ. ಉಳ್ಳವರ ಪರವಾಗಿರುವ ಇಂತಹ ನೀತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ’ ಎಂದು ಸಮಾನ ಶಿಕ್ಷಣ ಜನಾಂದೋಲನದ ಬಿ. ಶ್ರೀಪಾದ್‌ ಭಟ್‌ ಅಭಿಪ್ರಾಯಪಟ್ಟರು.

ಸಮುದಾಯ ಕರ್ನಾಟಕ ಸಂಸ್ಥೆ ವತಿಯಿಂದ ‘ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಸಮಾನ ಅವಕಾಶ’ ಕುರಿತು ಸೋಮವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಒಂದು ವರ್ಷ ಓದಿದರೆ ಸರ್ಟಿಫಿಕೇಟ್, ಎರಡು ವರ್ಷ ಓದಿದರೆ ಡಿಪ್ಲೊಮಾ ಸರ್ಟಿಫಿಕೇಟ್‌ ನೀಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ಅರ್ಧದಲ್ಲಿಯೇ ಶಿಕ್ಷಣ ತೊರೆಯುವವರ ಸಂಖ್ಯೆ ಹೆಚ್ಚಲಿದೆ. ಅಂದರೆ, ಒಂದು ವರ್ಷದ ಸರ್ಟಿಫಿಕೇಟ್‌ ತೆಗೆದುಕೊಂಡು ಕೆಲಸಕ್ಕೆ ಹೋಗುವವರೇ ಅನೇಕ. ಹೀಗೆ ಕೆಲಸದ ಅನಿವಾರ್ಯತೆ ಇರುವವರು ತಳಸಮುದಾಯದವರು ಮತ್ತು ಆರ್ಥಿಕವಾಗಿ ಹಿಂದುಳಿದವರು’ ಎಂದರು.

ADVERTISEMENT

‘ವಿದೇಶದಲ್ಲಿ ನಾಲ್ಕು ವರ್ಷದ ಪದವಿಯ ಪಡೆದವರನ್ನು ಮಾತ್ರ ಪರಿಗಣಿಸುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ನಾಲ್ಕು ವರ್ಷದ ಪದವಿ ಮತ್ತು ಯಾವ ವಿಷಯವನ್ನಾದರೂ ತೆಗೆದುಕೊಳ್ಳಬಹುದು ಎಂಬುದೂ ನೀತಿಯಲ್ಲಿದೆ. ಬೇರೆ ಬೇರೆ ವಿಷಯ ತೆಗೆದುಕೊಳ್ಳುತ್ತಿದ್ದರೆ ಕಲಿಕೆಯೇ ಅರೆ–ಬರೆಯಾಗುತ್ತದೆ. ಯಾವ ವಿಷಯದಲ್ಲಿಯೂ ವಿದ್ಯಾರ್ಥಿಗಳು ಪರಿಪೂರ್ಣ ಕೌಶಲ ಪಡೆಯುವುದಿಲ್ಲ’ ಎಂದರು.

‘ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಶಿಕ್ಷಕರು ಬೇರೆ–ಬೇರೆ ಶಾಲೆಗಳಿಗೆ ಹೋಗಿ ಪಾಠ ಮಾಡಬೇಕು ಎಂದು ಹೇಳುತ್ತಾರೆ. ಇದನ್ನು ಜಾರಿಗೆ ತರಲು ಸಾಧ್ಯವೇ ? ಶಿಕ್ಷಕರು ಶಾಲೆಯಿಂದ ಶಾಲೆಗೆ ಓಡಾಡಲು ಆಗುತ್ತದೆಯೇ ಅಥವಾ ಇದು ಅಗತ್ಯವೇ’ ಎಂದು ಪ್ರಶ್ನಿಸಿದರು.

‘ಎನ್‌ಇಪಿಯು ಖಾಸಗಿ ಸಂಸ್ಥೆಗಳಿಗೆ ಮಣೆ ಹಾಕಲಿದೆ. ಹೀಗಾದಾಗ, ಆರ್ಥಿಕವಾಗಿ ಹಿಂದುಳಿದವರು ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸಮುದಾಯ ಕರ್ನಾಟಕ ಸಹ ಕಾರ್ಯದರ್ಶಿ ಕೆ.ಎಸ್. ವಿಮಲಾ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.