ADVERTISEMENT

ಕಟ್ಟಿಗೇನಹಳ್ಳಿ ಸೇರಬೇಕಿದ್ದ ಗಂಧದ ಚಕ್ಕೆ ಜಪ್ತಿ

ಆಂಧ್ರಪ್ರದೇಶದ ಇಬ್ಬರ ಸೆರೆ * ಹೊಸದುರ್ಗದ ಅರಣ್ಯದಲ್ಲಿ ಮರ ಕಡಿದಿದ್ದರು

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 19:31 IST
Last Updated 25 ಜನವರಿ 2019, 19:31 IST
ಸಂಗ್ರಹ
ಸಂಗ್ರಹ   

ಬೆಂಗಳೂರು: ಹೊಸದುರ್ಗದ ಕಾಡಿನಲ್ಲಿ ಗಂಧದ ಮರಗಳನ್ನು ಕಡಿದು, ಅದರ ಚಕ್ಕೆಗಳನ್ನು ಹೊಸಕೋಟೆ ತಾಲ್ಲೂಕು ಕಟ್ಟಿಗೇನಹಳ್ಳಿಗೆ ಸಾಗಿಸುತ್ತಿದ್ದ ಆಂಧ್ರಪ್ರದೇಶದ ಇಬ್ಬರು ಮರಗಳ್ಳರು ಚಾಮರಾಜಪೇಟೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಆಂಧ್ರಪ್ರದೇಶದ ಕುಪ್ಪಂನವರಾದ ಚನ್ನರಾಯ (28) ಹಾಗೂ ಸುಬ್ರಮಣಿ (27) ಎಂಬುವರನ್ನು ಬಂಧಿಸಿರುವ ಪೊಲೀಸರು, 31 ಕೆ.ಜಿ ಗಂಧದ ಚಕ್ಕೆಗಳನ್ನು ಜಪ್ತಿ ಮಾಡಿದ್ದಾರೆ. ‍ಪ್ರಮುಖ ಆರೋಪಿಗಳಾದ ಆಂಧ್ರದ ಭಾಸ್ಕರ್ ಹಾಗೂ ಕಟ್ಟಿಗೇನಹಳ್ಳಿಯ ಹಮೀದ್ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದಾರೆ.

ಹೆಗಲಿಗೆ ಬ್ಯಾಗ್ ಹಾಕಿಕೊಂಡು ವಿದ್ಯಾರ್ಥಿಗಳ ಸೋಗಿನಲ್ಲಿ ಗುರುವಾರ ಸಂಜೆ ಚಾಮರಾಜಪೇಟೆಗೆ ಬಂದಿದ್ದ ಚನ್ನರಾಯ, ಸುಬ್ರಮಣಿ ಹಾಗೂ ಭಾಸ್ಕರ್, ಮೋಮಿನ್‌ಪುರ ಮಸೀದಿ ಸಮೀಪದ ಬಸ್ ನಿಲ್ದಾಣದಲ್ಲಿ ಹಮೀದ್‌ಗಾಗಿ ಕಾಯುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಇನ್‌ಸ್ಪೆಕ್ಟರ್ ತನ್ವೀರ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಭಾಸ್ಕರ್ ಬ್ಯಾಗ್ ಎಸೆದು ಓಡಿ ಹೋದರೆ, ಉಳಿದಿಬ್ಬರು ಅಲ್ಲೇ ಸಿಕ್ಕಿಬಿದ್ದಿದ್ದಾರೆ.

ADVERTISEMENT

‘ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಗಂಧದ ತುಂಡುಗಳ ಜತೆಗೆ ಬೇರಿನ ಚಕ್ಕೆಗಳೂ ಪತ್ತೆಯಾದವು. ನ್ಯಾಯಾಲಯದ ಅನುಮತಿ ಮೇರೆಗೆ ಆರೋಪಿಗಳನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಶೆಡ್ ಹಾಕಿ ಹೊಂಚು: ಆಂಧ್ರದಿಂದ 15 ದಿನಗಳ ಹಿಂದೆಯೇ ಹೊಸದುರ್ಗಕ್ಕೆ ತೆರಳಿದ್ದ ಆರೋಪಿಗಳು, ಗುಡ್ಡದಲ್ಲಿ ಶೆಡ್‌ ಹಾಕಿಕೊಂಡು ವಾಸವಿದ್ದರು. ನಾಲ್ಕೈದು ದಿನ ಅರಣ್ಯದಲ್ಲಿ ತಿರುಗಾಡಿ ಗಂಧದ ಮರಗಳನ್ನು ಗುರುತಿಸಿಕೊಂಡಿದ್ದರು. ಬಳಿಕ ಜ.14ರ ರಾತ್ರಿ ಸಲಕರಣೆಗಳೊಂದಿಗೆ ಹೋಗಿ ಮೂರು ಮರಗಳನ್ನು ಕತ್ತರಿಸಿದ್ದರು. ಮಹಜರು ಪ್ರಕ್ರಿಯೆಗಾಗಿ ಆರೋಪಿಗಳನ್ನು ಸೋಮವಾರ ಹೊಸದುರ್ಗಕ್ಕೆ ಕರೆದೊಯ್ಯಲಾಗುವುದು ಎಂದು ಪೊಲೀಸರು ಹೇಳಿದರು.

ಬೊಂಬೆ ವ್ಯಾಪಾರಿ ಸೆರೆ

ಕಮಿಷನರ್ ಕಚೇರಿಗೆ ಕೂಗಳತೆ ದೂರದಲ್ಲಿರುವ ‘ಎಂಬೆಸಿ’ ಕಟ್ಟಡದ ಆವರಣದಲ್ಲಿದ್ದ ಗಂಧದ ಮರವನ್ನು ಕಳವು ಮಾಡಿದ್ದ ಕಟ್ಟಿಗೇನಹಳ್ಳಿಯ ತಂದೆ–ಮಗನ (ಸೈಯದ್ ರಿಯಾಜ್, ಸೈಯದ್ ಷೇರ್ ಅಲಿ) ಗ್ಯಾಂಗ್, ಆ ಮರದ ತುಂಡುಗಳನ್ನು ಮೈಸೂರಿನ ಬೊಂಬೆ ವ್ಯಾಪಾರಿ ಹ್ಯಾರಿಸ್ ಇಕ್ಬಾಲ್‌ಗೆ ಮಾರಾಟ ಮಾಡಿತ್ತು.

ಇತ್ತೀಚೆಗೆ ಕಟ್ಟಿಗೇನಹಳ್ಳಿಗೇ ನುಗ್ಗಿ ತಂದೆ–ಮಗನನ್ನು ಬಂಧಿಸಿದ್ದ ಕೇಂದ್ರ ವಿಭಾಗದ ಪೊಲೀಸರು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅವರು ಹ್ಯಾರಿಸ್‌ನ ಹೆಸರು ಬಾಯ್ಬಿಟ್ಟಿದ್ದರು. ಆ ನಂತರ ವಿಧಾನಸೌಧ ಪೊಲೀಸರು ಮೈಸೂರಿಗೆ ತೆರಳಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆತನಿಂದ 8 ಕೆ.ಜಿಯ ಗಂಧದ ತುಂಡುಗಳನ್ನು ಜಪ್ತಿ ಮಾಡಲಾಗಿದೆ.

‘ಎಲಿಯಾಜ್ ಎಂಬ ಅರಣ್ಯಾಧಿಕಾರಿಯ ಮೂಲಕ ಮುರುಗೇಶ್ ಎಂಬಾತನ ಪರಿಚಯವಾಗಿತ್ತು. ‘ಅರಣ್ಯ ಇಲಾಖೆಯ ಹರಾಜು ಪ್ರಕ್ರಿಯೆಯಲ್ಲಿ ಗಂಧದ ತುಂಡುಗಳನ್ನು ಖರೀದಿಸಿ ತರುತ್ತೇನೆ’ ಎಂದು ಮುರುಗೇಶ್ ನನಗೆ ಸುಳ್ಳು ಹೇಳಿದ್ದ. ಅಧಿಕಾರಿಯ ಆಪ್ತ ಎಂಬ ಕಾರಣಕ್ಕೆ ಆತನ ಬಳಿಯೇ ತುಂಡುಗಳನ್ನು ಖರೀದಿಸುತ್ತಿದ್ದೆ. ಇತ್ತೀಚೆಗೆ, ಒಮ್ಮೆಲೆ 200 ಕೆ.ಜಿಯ ಗಂಧ ಖರೀದಿಸುವಂತೆ ಹಿಂದೆ ಬಿದಿದ್ದ. ಇದರಿಂದ ಅನುಮಾನ ಬಂದು, ಆತನೊಂದಿಗೆ ವ್ಯವಹಾರ ನಿಲ್ಲಿಸಲು ನಿರ್ಧರಿಸಿದ್ದೆ’ ಎಂದು ಹ್ಯಾರಿಸ್ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.