ADVERTISEMENT

ಒಬ್ಬ ದಾನಿಯ ಅಂಗಾಂಗ 8 ಜನರಿಗೆ ದಾನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 18:13 IST
Last Updated 26 ಡಿಸೆಂಬರ್ 2020, 18:13 IST
ಸಪ್ತಗಿರಿ ಆಸ್ಪತ್ರೆಯ ವೈದ್ಯಕೀಯ ತಂಡ
ಸಪ್ತಗಿರಿ ಆಸ್ಪತ್ರೆಯ ವೈದ್ಯಕೀಯ ತಂಡ   

ಪೀಣ್ಯ ದಾಸರಹಳ್ಳಿ: ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗಗಳು ಎಂಟು ಜನರ ಪಾಲಿಗೆ ಜೀವಸಂಜೀವಿನಿಯಾಗಿವೆ.

ಸಪ್ತಗಿರಿ ಆಸ್ಪತ್ರೆಯಲ್ಲಿ 37 ವರ್ಷದ ಶಿವಕುಮಾರ್ ಎಂಬುವರು ತಲೆನೋವು ಹಾಗೂ ಅರೆಪ್ರಜ್ಞೆಯ ಬಳಲಿಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಪಾರ್ಶ್ವವಾಯು ಆಗಿದ್ದ ಕಾರಣ ಎಷ್ಟೇ ಚಿಕಿತ್ಸೆ ನೀಡಿದರೂ ಚೇತರಿಕೆ ಕಾಣದೆ ಮೆದುಳು ನಿಷ್ಕ್ರಿಯಗೊಂಡಿತ್ತು. ವೈದ್ಯರು ಈ ವಿಷಯವನ್ನು ಸಂಬಂಧಿಕರಿಗೆ ತಿಳಿಸಿ, ಅಂಗಾಂಗ ದಾನದ ಮಹತ್ವ ವಿವರಿಸಿದರು. ಸಂಬಂಧಿಕರು ತಕ್ಷಣವೇ ಒಪ್ಪಿಗೆ ನೀಡಿದರು.

‘ರೋಗಿಯ ಹೃದಯ, ಶ್ವಾಸಕೋಶ, ಯಕೃತ್, ಎರಡು ಕಾರ್ನಿಯಾ ಹಾಗೂ ಎರಡು ಮೂತ್ರಪಿಂಡಗಳನ್ನು ವಿಭಿನ್ನ ಆಸ್ಪತ್ರೆಯಲ್ಲಿ ವಿಭಿನ್ನ ರೋಗಿಗಳಿಗೆ ಅಂಗಾಂಗ ಕಸಿ ಮಾಡಲಾಯಿತು. ಅವರೆಲ್ಲರೂ ಈಗ ಆರೋಗ್ಯವಾಗಿದ್ದಾರೆ’ ಎಂದು ಆಸ್ಪತ್ರೆಯ ವೈದ್ಯೆ ಡಾ. ಜಯಂತಿ ತಿಳಿಸಿದರು.

ADVERTISEMENT

‘ಈ ಕಾರ್ಯದಲ್ಲಿ ನಮ್ಮ ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸೇವೆ ಅಪಾರವಾ' ಎಂದರು.

ಮೂತ್ರಪಿಂಡ ತಜ್ಞ ಡಾ. ಸಂಜಯ್ ಶ್ರೀನಿವಾಸ್ 'ದೇಹ ಅಂಗಾಂಗ ದಾನಕ್ಕೆ ವಿವಿಧ ಆಸ್ಪತ್ರೆಗಳ ನಡುವೆ ಸರ್ಕಾರ ಬೆಂಬಲಿತ ಜೀವನ್ ಸಾರ್ಥಕ ಸಂಸ್ಥೆಯ ಸಹಕಾರದಿಂದ ಈ ಕಾರ್ಯ ಕೈಗೊಳ್ಳಲಾಗಿತ್ತು. ಮೊದಲು ನೋಂದಾಯಿತ ಅರ್ಹ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿ, ಅದರ ಆಧಾರದ ಮೇಲೆ ಅಂಗಾಂಗ ಕಸಿ ವರ್ಗಾವಣೆ ಮಾಡಲಾಯಿತು’ ಎಂದರು.

'ಒಬ್ಬ ತಾಯಿ ತನ್ನ ಮಗುವಿಗೆ ಜೀವ ಹಾಗೂ ಜೀವನವನ್ನು ದಾನ ಮಾಡುತ್ತಾಳೆ. ಆದರೆ 37 ವರ್ಷದ ಒಬ್ಬ ವ್ಯಕ್ತಿ ತನ್ನವರಲ್ಲದ ಎಂಟು ಜನರಿಗೆ ತನ್ನ ಅಂಗಾಂಗಗಳನ್ನು ದಾನ ಮಾಡಿ ಜೀವ ಉಳಿಸಿದ್ದಾನೆ' ಎಂದರು.

'ಸಪ್ತಗಿರಿ ವೈದ್ಯಕೀಯ ಕಾಲೇಜು ಪ್ರಾರಂಭವಾದ ಹತ್ತು ವರ್ಷದಲ್ಲಿ ಅಂಗಾಂಗ ಕಸಿ ಮತ್ತು ದೇಹ ದಾನಿಗಳ ಕಾರ್ಯಕ್ರಮವನ್ನು ಆಯೋಜಿಸುತ್ತಾ ಯಶಸ್ವಿಯಾಗಿ ನಿರ್ವಹಿಸುತ್ತಿದೆ' ಎಂದರು.

ಮೂತ್ರಪಿಂಡ ತಜ್ಞರಾದ ಡಾ. ಸಂಜಯ್ ಶ್ರೀನಿವಾಸ್, ಡಾ. ಸಂಜೀವ್ ಜೋಸ್ನಾ, ಜೀವನ್ ಸಾರ್ಥಕ್‌ನ ಮಂಜುಳಾ, ಡಾ. ಗಿರೀಶ್, ಡಾ. ಹರ್ಷ ಹಾಗೂ ಆಸ್ಪತ್ರೆಯ ಆಡಳಿತ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.