ADVERTISEMENT

ಕೊಡಿಗೇಹಳ್ಳಿ ಮೇಲ್ಸೇತುವೆ ರಸ್ತೆಯಲ್ಲಿ ಸರಣಿ ಅಪಘಾತ: ಲಾರಿ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 24 ಮೇ 2025, 23:39 IST
Last Updated 24 ಮೇ 2025, 23:39 IST
ಹೆಬ್ಬಾಳ ಮೇಲ್ಸೇತುವೆಯಲ್ಲಿ ಸರಣಿ ಅಪಘಾತ. 
ಹೆಬ್ಬಾಳ ಮೇಲ್ಸೇತುವೆಯಲ್ಲಿ ಸರಣಿ ಅಪಘಾತ.    

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಯಲ್ಲಿ ಶುಕ್ರವಾರ ತಡರಾತ್ರಿ ಸರಣಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಲಾರಿ ಚಾಲಕ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. 

ಹೆಬ್ಬಾಳ ಸಂಚಾರ ಪೊಲೀಸ್​ ಠಾಣಾ ವ್ಯಾಪ್ತಿಯ ಮೇಲ್ಸೇತುವೆಯಲ್ಲಿ ಘಟನೆ ನಡೆದಿದೆ. ‌ಕಸ ತುಂಬಿದ್ದ ಲಾರಿಯ ಮೇಲೆ ಕಲ್ಲು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿದೆ. ಲಾರಿ ಚಾಲಕ, ಬಿಹಾರದ ಫಯಾಜ್​ ಅಹಮ್ಮದ್ (25)​ ಮೃತಪಟ್ಟಿದ್ದಾರೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂರು ವಾಹನಗಳು ಜಖಂಗೊಂಡಿವೆ.

ಘಟನೆಯಲ್ಲಿ ಗಾಯಗೊಂಡಿರುವ ಟ್ರಕ್‌ ಚಾಲಕ ಹಾಗೂ ಕ್ಲೀನರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ADVERTISEMENT

ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ಮಾರ್ಗದಲ್ಲಿ ಬಿಬಿಎಂಪಿ ಕಸ ಸಂಗ್ರಹಿಸುವ ಲಾರಿ ಕೆಟ್ಟು ನಿಂತಿತ್ತು. ಈ ವೇಳೆ ಕಸದ ಲಾರಿಗೆ ಕಲ್ಲು ಸಾಗಿಸುತ್ತಿದ್ದ 10 ಚಕ್ರದ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿ ಕೆಳಗೆ ಸಿಲುಕಿ ಫಯಾಜ್ ಮೃತಪಟ್ಟರು.   

ಘಟನಾ ಸ್ಥಳಕ್ಕೆ ಆಗಮಿಸಿದ ಹೆಬ್ಬಾಳ ಸಂಚಾರ ಪೊಲೀಸರು,  ಬಳಿಕ ವಾಹನಗಳನ್ನು ತೆರವುಗೊಳಿಸಿದರು. ಚಾಲಕನ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಪೊಲೀಸರು ಕ್ರೇನ್ ಬಳಸಿ ರಸ್ತೆ ಮೇಲೆ ಬಿದ್ದಿದ್ದ ಕಲ್ಲುಗಳು ಹಾಗೂ ವಾಹನಗಳನ್ನು ತೆರವು ಮಾಡಿಸಿದರು. ತಾತ್ಕಾಲಿಕವಾಗಿ ಸರ್ವಿಸ್ ರಸ್ತೆಯಲ್ಲಿ ಪರ್ಯಾಯ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಜಾವ 5.30ರ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು. 

ಮೃತನ ಸ್ನೇಹಿತ ಶಹಬಾಜ್ ಮಾತನಾಡಿ, ‘ಮೇಲ್ಸೇತುವೆಯಲ್ಲಿ ಸಾಗುವಾಗ ವಾಹನ ಕೆಟ್ಟು ಹೋಗಿದ್ದರಿಂದ ನಿಲ್ಲಿಸಲಾಗಿತ್ತು. ಹಿಂದಿನಿಂದ ಬಂದ ಟ್ರಕ್‌ ಡಿಕ್ಕಿ ಹೊಡೆಯಿತು. ಫಯಾಜ್ ಮೂರು ವರ್ಷದಿಂದ ಲಾರಿ ಓಡಿಸುತ್ತಿದ್ದರು’ ಎಂದು ತಿಳಿಸಿದರು. 

ಕಾರು ಚಾಲಕ ಸುನಿಲ್ ಮಾತನಾಡಿ, ‘ಕಸದ ಲಾರಿ ರಸ್ತೆಯ ಬಲಬದಿ ನಿಂತಿತ್ತು. ಕಲ್ಲು ಸಾಗಿಸುತ್ತಿದ್ದ ಟ್ರಕ್‌ ಚಾಲಕನಿಗೆ ಲಾರಿ ನಿಂತಿರುವುದು ಕಾಣಿಸಲಿಲ್ಲ. ಹತ್ತಿರ ಬಂದು ಬ್ರೇಕ್ ಹಾಕಿದ್ದು, ವಾಹನ ನಿಯಂತ್ರಣಕ್ಕೆ ಸಿಗದೆ ಡಿಕ್ಕಿ ಹೊಡೆದಿದೆ. ಆಗ ನಾನು ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದೆ. ಅಪಘಾತದ ರಭಸಕ್ಕೆ ಲಾರಿಯ ಕಲ್ಲುಗಳು ರಸ್ತೆಗೆ ಬಿದ್ದವು. ಕಾರು ನಿಯಂತ್ರಣ ತಪ್ಪಿ, ಮೇಲ್ಸೇತುವೆ ತಡೆಗೋಡೆ ಮೇಲೆ ಹತ್ತಿತ್ತು. ಬಳಿಕ ಕಾರಿನಲ್ಲಿದ್ದವರನ್ನು ಕೆಳಗೆ ಇಳಿಸಲಾಯಿತು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.