ADVERTISEMENT

ಕುಟುಂಬದ ಮೂವರಿಗೆ ಚಾಕು ಇರಿತ: ಯುವಕನ ಬಂಧನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 15:40 IST
Last Updated 16 ಏಪ್ರಿಲ್ 2025, 15:40 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕುಟುಂಬದ ಮೂವರು ಸದಸ್ಯರಿಗೆ ಚಾಕುವಿನಿಂದ ಇರಿದ ಆರೋಪದ ಮೇಲೆ 22 ವರ್ಷದ ಯುವಕನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಚಿಕ್ಕಬಾಣಾವರ ನಿವಾಸಿ, ಡಿಪ್ಲೊಮಾ ಪದವೀಧರ ಕೆ. ಹರ್ಷ ಬಂಧಿತ ಆರೋಪಿ.

ಏಪ್ರಿಲ್ 14ರ ತಡರಾತ್ರಿ ಈ ಘಟನೆ ನಡೆದಿದೆ. ಆರೋಪಿಯು ತನ್ನ ತಂದೆ ಕೃಷ್ಣಮೂರ್ತಿ ವೈ.ವಿ (51), ತಾಯಿ ಪಾರ್ವತಮ್ಮ (45) ಮತ್ತು ಅಕ್ಕ ನಯನಾ (24) ಅವರೊಂದಿಗೆ ವಾಸಿಸುತ್ತಿದ್ದ. ದಾಳಿ ನಡೆದ ರಾತ್ರಿ ತಂದೆ ಹಾಲ್‌ನಲ್ಲಿ ಮಲಗಿದ್ದರೆ, ಪಾರ್ವತಮ್ಮ ಟಿ.ವಿ ನೋಡುತ್ತಿದ್ದರು. ನಯನಾ ತನ್ನ ಕೋಣೆಯಲ್ಲಿ ಮಲಗಿದ್ದರು ಎಂದು ಪೊಲೀಸರು ತಿಳಿಸಿದರು.

‘ರಾತ್ರಿ 11 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಹರ್ಷ ನನ್ನಲ್ಲಿ ಬಂದು , 'ನೀವು ನನ್ನ ತಂದೆ, ತಾಯಿ ಅಲ್ಲ. ನಯನಾ ನನ್ನ ಅಕ್ಕ ಅಲ್ಲ’  ಎಂದು ಕಿರುಚಾಡಿದ. ಮಗನ ವರ್ತನೆ ಕಂಡು ಗಾಬರಿಯಾಯಿತು. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ಪತ್ನಿಗೆ ತಿಳಿಸಿದೆ. ಇದನ್ನು ಕೇಳಿದ ಹರ್ಷ, ‘ನನ್ನನ್ನು ಕೊಲೆ ಮಾಡಲು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೀರಾ ಎಂದು ಕೂಗಾಡಿದ’ ಎಂದು ಕೃಷ್ಣಮೂರ್ತಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಬೆಳಗಿನ ಜಾವ 2 ಗಂಟೆಯವರೆಗೆ ಜಗಳವಾಡಿದ ಬಳಿಕ ಹರ್ಷ, ಪೊಲೀಸರಿಗೆ ಕರೆ ಮಾಡಿ ಮನೆಗೆ ಬೀಗ ಹಾಕಿ ಕೀಲಿಯನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ. ಬಾಗಿಲು ತೆರೆಯಲು ಹೇಳಿದಾಗ ಕೋಪಗೊಂಡು ಅಡುಗೆ ಮನೆಯಿಂದ ಚಾಕು ತೆಗೆದುಕೊಂಡು ಬಂದು ಮೂವರಿಗೆ ಇರಿದಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಾಯಗೊಂಡ ಮೂವರನ್ನು ಪೊಲೀಸರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.