ಬೆಂಗಳೂರು: ‘ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟವರ ಅಂಗಾಂಗಗಳನ್ನು ಪಡೆಯುವ ಪ್ರಯತ್ನಗಳು ಜಿಲ್ಲಾ ಆಸ್ಪತ್ರೆಗಳಲ್ಲಿ ನಡೆಯುತ್ತಿಲ್ಲ. ಎಲ್ಲ ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಅಂಗಾಂಗ ಮರುಪಡೆಯುವ ಕೇಂದ್ರಗಳನ್ನು ಕೂಡಲೇ ಪ್ರಾರಂಭಿಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.
ಜೀವಸಾರ್ಥಕತೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯನ್ನು ಸೋಮವಾರ ಅವರು ನಡೆಸಿದರು.
‘ರಾಜ್ಯದಲ್ಲಿ ಜೀವಸಾರ್ಥಕತೆ ಕಾರ್ಯಕ್ರಮದ ಅಡಿಯಲ್ಲಿ ಅಂಗಾಂಗ ದಾನ ಮತ್ತು ಅಂಗಾಂಗ ಕಸಿ ಆರೋಗ್ಯ ಸೇವೆಗಳನ್ನು ಹೆಚ್ಚಿಸಲು ಸರ್ಕಾರಿ ಜಿಲ್ಲಾ ಆಸ್ಪತ್ರೆಗಳು ಗಮನ ಹರಿಸಬೇಕು. ಅಂಗಾಂಗ ಪಡೆಯಲು ನಿರಾಸಕ್ತಿ ತೋರುವುದನ್ನು ನಿಲ್ಲಿಸಬೇಕು’ ಎಂದು ಹೇಳಿದರು.
ರಾಜ್ಯದ ಮೂರು ಸ್ಥಳಗಳಲ್ಲಿ ಬೆಂಗಳೂರು ಮೆಡಿಕಲ್ ಸರ್ವಿಸ್ ಟ್ರಸ್ಟ್ (ಬಿಎಂಎಸ್‌ಟಿ) ಅಡಿಯಲ್ಲಿ ಹ್ಯೂಮನ್ ಲ್ಯುಕೋಸೈಟ್ ಆ್ಯಂಟಿಜೆನ್ (ಎಚ್‌ಎಲ್‌ಎ) ಪ್ರಯೋಗಾಲಯಗಳನ್ನು ಸ್ಥಾಪಿಸಲು ‘ಕೆಎಂಸಿ ಆ್ಯಂಡ್ ಆರ್‌ಐ’ ಮಾದರಿಯನ್ನು ಅನ್ವೇಷಿಸಬೇಕು ಎಂದರು.
ಜೀವಸಾರ್ಥಕತೆ ಸೊಸೈಟಿಯ ನೋಂದಣಿ ನವೀಕರಿಸಲು, ಕಾರ್ಯಾಚರಣಾ ವಲಯಗಳ ಸಂಖ್ಯೆಯನ್ನು ಐದರಿಂದ ಏಳಕ್ಕೆ ವಿಸ್ತರಿಸಲು ನಿರ್ಧರಿಸಲಾಯಿತು. ಸ್ಟೀರಿಂಗ್ ಸಮಿತಿಯನ್ನು ರಚಿಸುವುದರ ಜೊತೆಗೆ ಅಂಗಾಂಗ ವಿತರಣೆ ಸಮರ್ಪಕವಾಗಿ ಒದಗಿಸಲು ಮೂತ್ರಪಿಂಡ ಹಂಚಿಕೆ ನೀತಿಯನ್ನು ಸಹ ಪರಿಷ್ಕರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.