ADVERTISEMENT

ಟೆಕಿ ಕೊಲೆ ಆರೋಪಿಗೆ ಜೈಲು

ತೀರ್ಪು ನೀಡಿದ ಸಿಬಿಐ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 21:54 IST
Last Updated 6 ನವೆಂಬರ್ 2019, 21:54 IST
ಪಾಯಲ್‌ ಸುರೇಖಾ
ಪಾಯಲ್‌ ಸುರೇಖಾ   

ಬೆಂಗಳೂರು: 27 ವರ್ಷದ ಟೆಕಿ ಪಾಯಲ್‌ ಸುರೇಖಾ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಜಿಮ್‌ ಇನ್‌ಸ್ಟ್ರಕ್ಟರ್‌ ಜೇಮ್ಸ್‌ ಕುಮಾರ್‌ ರಾಯ್‌ ಎಂಬಾತನಿಗೆ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸಿದೆ. ಈ ಪ್ರಕರಣ ದೇಶದಾದ್ಯಂತ ಕುತೂಹಲ ಕೆರಳಿಸಿತ್ತು.

2010ರ ಡಿಸೆಂಬರ್‌ 17ರಂದು ಸುರೇಖಾ ಅವರ ಶವ ಜೆ.ಪಿ ನಗರ 6ನೇ ಹಂತದ ಆರ್‌ಬಿಐ ಬಡಾವಣೆಯ ಸರ್ವಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆ ಆಗಿತ್ತು. ಅವರ ಪತಿ ಅನಂತ್‌ ನಾರಾಯಣ ಮಿಶ್ರಾ ಭುವನೇಶ್ವರದಲ್ಲಿ ನಡೆಸುತ್ತಿದ್ದ ಕಟ್ಸ್‌ ಅಂಡ್‌ ಕರ್ವ್ಸ್‌ ಜಿಮ್‌ನಲ್ಲಿ ಅಪರಾಧಿ ರಾಯ್‌ ಇನ್‌ಸ್ಟ್ರಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ. ಸುರೇಖಾ ಅವರ ಸೂಚನೆ ಮೇಲೆ ರಾಯ್‌ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಹಗೆ ಸಾಧಿಸುತ್ತಿದ್ದ ಅಪರಾಧಿ ಬಳಿಕ ಅವರನ್ನು ಕೊಲೆ ಮಾಡಿದ್ದ.

17ರಂದು ಬೆಂಗಳೂರಿಗೆ ಬಂದಿದ್ದರಾಯ್‌ ಸುರೇಖಾ ಅವರಿದ್ದ ಅಪಾರ್ಟ್‌ಮೆಂಟ್‌ಗೆ ಹೋಗಿದ್ದ. ಅಪರಾಧಿಯ ಯೋಜನೆ ಅರಿಯದ ಮಹಿಳೆ ಬಾಗಿಲು ತೆರೆದು ಬೆಡ್‌ ರೂಮ್‌ಗೆ ದುಪ್ಪಟ ತರಲು ಹೋಗುತ್ತಿದ್ದರು. ಹಿಂಬಾಲಿಸಿದ ರಾಯ್‌ ಅವರ ಮೇಲೆ ಬಿದ್ದು ಕತ್ತು ಸೀಳಿದ್ದ ದೇಹದ ಮೇಲೂ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಅದಕ್ಕೆ ಮೊದಲೂ ಅಪರಾಧಿ ಒಂದೆರಡು ಸಲ ಸುರೇಖಾ ಅವರಿದ್ದ ಅಪಾರ್ಟ್‌ಮೆಂಟ್‌ಗೆ ಬಂದು ಹೋಗಿದ್ದಎಂದು ಪೊಲೀಸರು ಹೇಳಿದ್ದರು.

ADVERTISEMENT

ಜೆ.ಪಿ ನಗರ ಇನ್‌ಸ್ಪೆಕ್ಟರ್‌ ಎಸ್‌.ಕೆ. ಉಮೇಶ್‌, ಅಪರಾಧಿಯನ್ನು ಬಂಧಿಸಿದ್ದರು. ಆತನ ಜಾಕೆಟ್‌ ಮೇಲೆ ಇದ್ದ ರಕ್ತದ ಕಲೆ ಹಾಗೂ ಕೂದಲು ಸುರೇಖಾ ಅವರದ್ದು ಎಂದು ಡಿಎನ್‌ಎ ಪರೀಕ್ಷೆಯಿಂದ ದೃಢಪಟ್ಟಿತ್ತು. ಆದರೆ, ಮಹಿಳೆಯ ಪೋಷಕರು ಈ ಕೊಲೆಯಲ್ಲಿ ಪತಿ ಮಿಶ್ರಾ ಕೈವಾಡ ಇರಬಹುದು ಎಂದು ಶಂಕಿಸಿದ್ದರು. ಆನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಕೋರ್ಟ್‌ ಸಿಬಿಐಗೆ ಒಪ್ಪಿಸಿತ್ತು.

ಸಿಬಿಐ ಅಧಿಕಾರಿಗಳು ಬೆಂಗಳೂರು ‍ಪೊಲೀಸರ ತನಿಖೆಯನ್ನೇ ಸಮರ್ಥಿಸಿದ್ದರು. ಸುರೇಖಾ 2005ರಲ್ಲಿ ಬೆಂಗಳೂರಿನಲ್ಲಿ ಓದುತ್ತಿದ್ದರು. ಪತಿ ಮಿಶ್ರಾ ಅವರೂ ಇಲ್ಲೇ ಓದುತ್ತಿದ್ದರು. ಆವಾಗಿನಿಂದಲೂ ಇಬ್ಬರೂ ಪ್ರೀತಿಸುತ್ತಿದ್ದರು. 2008ರಲ್ಲಿ ಮದುವೆಯಾ
ಗಿದ್ದರು. ಆನಂತರ ಸುರೇಖಾಗೆ ಬೆಂಗಳೂರಿನಲ್ಲೇ ಕೆಲಸ ಸಿಕ್ಕಿದ್ದರಿಂದ ಇಲ್ಲಿಗೆ ಬಂದು ಸರ್ವಿಸ್‌ ಅಪಾರ್ಟ್‌
ಮೆಂಟ್‌ನಲ್ಲಿ ವಾಸವಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.