ADVERTISEMENT

₹ 28,500 ದಂಡದಿಂದ ತಪ್ಪಿಸಿಕೊಳ್ಳಲು ನಕಲಿ ಫಲಕ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 16:30 IST
Last Updated 5 ಜುಲೈ 2022, 16:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದ್ವಿಚಕ್ರ ವಾಹನದ ಮೇಲೆ ವಿಧಿಸಿದ್ದ ₹ 28,500 ದಂಡದಿಂದ ತಪ್ಪಿಸಿಕೊಳ್ಳಲು ನಕಲಿ ನೋಂದಣಿ ಸಂಖ್ಯೆ ಫಲಕ ಅಳವಡಿಸಿಕೊಂಡಿದ್ದ ಆರೋಪದಡಿ ಮಾಲೀಕ ಆರ್. ನಿಖಿಲ್ ಎಂಬುವರ ವಿರುದ್ಧ ವಿಜಯನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ವಿಜಯನಗರದ ಮಾರೇನಹಳ್ಳಿ ಜಂಕ್ಷನ್‌ನಲ್ಲಿ ಜುಲೈ 3ರಂದು ಕರ್ತವ್ಯದಲ್ಲಿದ್ದ ಸಿಬ್ಬಂದಿ, ಸಂಚಾರ ನಿಯಮ ಉಲ್ಲಂಘಿಸುವವರನ್ನು ತಡೆದು ದಂಡ ವಿಧಿಸುತ್ತಿದ್ದರು. ಅದೇ ಮಾರ್ಗವಾಗಿ ಹೊರಟಿದ್ದ ದ್ವಿಚಕ್ರ ವಾಹನದ (ಕೆಎ 02 ಜೆ 938) ಸವಾರ, ತನ್ನನ್ನು ತಡೆಯಲು ಬಂದ ಕಾನ್‌ಸ್ಟೆಬಲ್‌ ಹರೀಶ್ ಅವರನ್ನು ತಳ್ಳಿ ಪರಾರಿಯಾಗಲು ಯತ್ನಿಸಿದ್ದ. ಸಿಬ್ಬಂದಿ ಬೆನ್ನಟ್ಟಿದಾಗ, ರಸ್ತೆಯಲ್ಲಿ ವಾಹನ ಬಿಟ್ಟು ಓಡಿಹೋಗಿದ್ದ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಹೇಳಿದರು.

‘ವಾಹನದ ಎಂಜಿನ್ ಹಾಗೂ ಚಾಸೀಸ್ ನಂಬರ್ ಪರಿಶೀಲಿಸಿದಾಗ, ವಾಹನದ ಅಸಲಿ ನೋಂದಣಿ ಸಂಖ್ಯೆ ಕೆಎ 02 ಜೆಜಿ– 9381 ಎಂಬುದು ತಿಳಿಯಿತು. ಸವಾರ ತನ್ನ ದ್ವಿಚಕ್ರ ವಾಹನದಲ್ಲಿ 55 ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ. ಇದಕ್ಕಾಗಿ ₹ 28,500 ದಂಡ ವಿಧಿಸಲಾಗಿತ್ತು. ಪೊಲೀಸರು ತನ್ನ ವಾಹನ ಹಿಡಿದು ಪೂರ್ತಿ ದಂಡ ವಸೂಲಿ ಮಾಡಬಹುದೆಂದು ತಿಳಿದ ಸವಾರ, ನೋಂದಣಿ ಸಂಖ್ಯೆ ಫಲಕವನ್ನೇ ಬದಲಿಸಿದ್ದ’ ಎಂದು ತಿಳಿಸಿದರು.

ADVERTISEMENT

‘ಕಾನ್‌ಸ್ಟೆಬಲ್ ನೀಡಿದ್ದ ದೂರಿನನ್ವಯ ವಂಚನೆ ಆರೋಪದಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದ್ವಿಚಕ್ರ ವಾಹನ ಜಪ್ತಿ ಮಾಡಿ, ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.