ADVERTISEMENT

ನೇತಾಜಿ ಹೆಸರಿನಲ್ಲಿ ತರಬೇತಿ ಅಕಾಡೆಮಿ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 18:57 IST
Last Updated 4 ಫೆಬ್ರುವರಿ 2022, 18:57 IST
ರಾಜ್ಯ ವಿಪತ್ತು ಸ್ಪಂದನಾ ಪಡೆಯ ನೂತನ ವಾಹನಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿದರು ಪ್ರಜಾವಾಣಿ ಚಿತ್ರ
ರಾಜ್ಯ ವಿಪತ್ತು ಸ್ಪಂದನಾ ಪಡೆಯ ನೂತನ ವಾಹನಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಹಿನ್ನೆಲೆಯಲ್ಲಿ, ಅವರ ಹೆಸರಿನಲ್ಲಿ ದೊಡ್ಡಬಳ್ಳಾಪುರದಲ್ಲಿರುವ ಅಗ್ನಿಶಾಮಕ ಪಡೆಯ 20 ಎಕರೆ ಜಾಗದಲ್ಲಿ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಕೇಂದ್ರೀಯ ತರಬೇತಿ ಅಕಾಡೆಮಿ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ವಿಧಾನಸೌಧದ ಮುಂಭಾಗದಲ್ಲಿ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಆಂಬುಲೆನ್ಸ್, ಜೀಪು, ಸರಕು ಸಾಗಣೆ ವಾಹನ, ಜನರೇಟರ್ ಒಳಗೊಂಡ ಟ್ರಕ್ ವಾಹನಗಳಿಗೆ ಅವರು ಚಾಲನೆ ನೀಡಿ ಮಾತನಾಡಿದರು.

‘ನೇತಾಜಿ ಅವರ 125ನೇ ಜಯಂತಿ ಸಂದರ್ಭದಲ್ಲಿ ಮುಂದಿನ ತಲೆಮಾರಿಗೆ ಅವರ ಆದರ್ಶಗಳನ್ನು ನೆನಪಿಸುವಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.

ADVERTISEMENT

‘ದಿನದ 24 ಗಂಟೆ ನೆರವಿಗೆ ಧಾವಿಸಲು ಸ್ಪಂದನಾ ಪಡೆಗೆ ₹ 20 ಕೋಟಿ ವೆಚ್ಚದಲ್ಲಿ ಹೊಸ ವಾಹನಗಳನ್ನು ಖರೀದಿಸಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ ಇನ್ನೂ ಮೂರು ರಾಜ್ಯ ವಿಪತ್ತು ಸ್ಪಂದನಾ ಪಡೆಯ ತುಕಡಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಶೋಧನಾ ಮತ್ತು ರಕ್ಷಣಾ ಉಪಕರಣ ಖರೀದಿಗೆ ₹ 9.65 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

ಅಗ್ನಿಶಾಮಕ ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ ಅಮರ್‌ಕುಮಾರ್ ಪಾಂಡೆ, ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಕೃಷ್ಣಮೂರ್ತಿ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರತಾಪ್‍ ರೆಡ್ಡಿ, ವಿಧಾನಪರಿಷತ್ ಸದಸ್ಯ ಎಚ್.ಎಂ. ರಮೇಶ್‍ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.