ADVERTISEMENT

ರಸ್ತೆ ಗುಂಡಿ: ಉರುಳಿಬಿದ್ದ ದ್ವಿಚಕ್ರ ವಾಹನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 20:41 IST
Last Updated 26 ಆಗಸ್ಟ್ 2022, 20:41 IST

ಬೆಂಗಳೂರು: ಕಸ್ತೂರಿನಗರದ ಮೇಲ್ಸೇತುವೆಯಲ್ಲಿ ಗುಂಡಿಯಿಂದಾಗಿ ದ್ವಿಚಕ್ರ ವಾಹನವೊಂದು ಉರುಳಿಬಿದ್ದು ಯುವತಿ ಗಾಯಗೊಂಡಿದ್ದು, ಅಪಘಾತದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು, ಇದರಿಂದಾಗಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ. ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕಾದ ಬಿಬಿಎಂಪಿ ಸಹ ಮೌನವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ಯುವತಿಯೊಬ್ಬರು ದ್ವಿಚಕ್ರ ವಾಹನ ಚಲಾಯಿಸಿಕೊಂಡು ಕಸ್ತೂರಿನಗರದ ಮೇಲ್ಸೇತುವೆಯಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ದೊಡ್ಡ ಗುಂಡಿ ಬಿದ್ದಿದೆ. ಅದನ್ನು ಯುವತಿ ಗಮನಿಸಿರಲಿಲ್ಲ. ಕಾರಿನ ಹಿಂದೆ ಹೊರಟಿದ್ದ ಯುವತಿಯ ದ್ವಿಚಕ್ರ ವಾಹನ, ಗುಂಡಿಯಲ್ಲಿ ಇಳಿದು ಉರುಳಿಬಿದ್ದಿತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ADVERTISEMENT

‘ದ್ವಿಚಕ್ರ ವಾಹನ ಸಮೇತ ಯುವತಿ ಉರುಳಿಬಿದ್ದ ದೃಶ್ಯ, ರಸ್ತೆಯಲ್ಲಿ ಹೊರಟಿದ್ದ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ’ ಎಂದು ತಿಳಿಸಿದರು.

‘ಯುವತಿಗೆ ಸಣ್ಣಪುಟ್ಟ ಗಾಯವಾಗಿದೆ. ರಸ್ತೆಯಲ್ಲಿ ಹೊರಟಿದ್ದ ಸಾರ್ವಜನಿಕರೇ, ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿದ್ದಾರೆ. ಯುವತಿಯ ಹೆಸರು ಗೊತ್ತಾಗಿಲ್ಲ’ ಎಂದು ಹೇಳಿದರು.

ಇತ್ತೀಚೆಗಷ್ಟೇ ಸುಂಕದಕಟ್ಟೆ ಬಳಿ ರಸ್ತೆಗುಂಡಿಯಿಂದ ಅಪಘಾತ ಸಂಭವಿಸಿ ಬೈಕ್ ಸವಾರ ಸುಪ್ರೀತ್‌ರಾಜ್ (39) ಮೃತಪಟ್ಟಿದ್ದರು. ಇವರ ಸಾವಿಗೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಸಹೋದರ ಪೊಲೀಸರಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.