ಬೆಂಗಳೂರು: ‘ಕಾದಂಬರಿಗಾರ್ತಿ ಅನುಪಮಾ ನಿರಂಜನ ಹೆಸರಿನಲ್ಲಿ ಸಂಶೋಧನಾ ಕೇಂದ್ರ ಅಥವಾ ಟ್ರಸ್ಟ್ ಸ್ಥಾಪಿಸಬೇಕು’ ಎಂದು ಲೇಖಕಿ ಡಾ.ವಸುಂಧರಾ ಭೂಪತಿ ಅವರು ಸರ್ಕಾರವನ್ನು ಒತ್ತಾಯಿಸಿದರು.
ಕನ್ನಡ ಸಂಘರ್ಷ ಸಮಿತಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ‘ಅನುಪಮಾ ನಿರಂಜನ ಪ್ರಶಸ್ತಿ’ ಹಾಗೂ ಕನ್ನಡ ಪರ ಹೋರಾಟಗಾರ ಸುರೇಶ್ ಕೆ. ಅವರಿಗೆ ‘ಡಾ.ಕೋ.ವೆಂ.ಪರಿಚಾರಿಕ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು.
‘ಅನುಪಮಾ ನಿರಂಜನ ಅವರು ಕೇವಲ ವೈದ್ಯೆಯಾಗಿರದೆ, ಉತ್ತಮ ಲೇಖಕಿಯೂ ಆಗಿದ್ದರು. ಸ್ತನ ಕ್ಯಾನ್ಸರ್ ಲೆಕ್ಕಿಸದೆ ಕಾದಂಬರಿ, ಕಥೆಗಳನ್ನು ಬರೆದರು. ತಾನು ಹೆಚ್ಚು ಅವಧಿ ಬದುಕಲಾರೆ ಎಂಬುದು ತಿಳಿದಿದ್ದರೂ ಸಾಹಿತ್ಯ ರಚನೆಯನ್ನು ಬಿಡಲಿಲ್ಲ. ಅವರ ಕಥೆ, ಕಾದಂಬರಿಗಳು ಇಂದಿಗೂ ಪ್ರಸ್ತುತ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ, ಸರ್ಕಾರವು ಟ್ರಸ್ಟ್ ಅಥವಾ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು’ ಎಂದರು.
‘ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮಾ ಅವರು ಮೌಲಿಕ ಕೊಡುಗೆ ನೀಡಿದ್ದಾರೆ. ಆದರೆ, ಕನ್ನಡ ವಿಮರ್ಶಾ ಲೋಕ ಅವರ ಸಾಹಿತ್ಯಕ್ಕೆ ಅಷ್ಟಾಗಿ ಮನ್ನಣೆ ನೀಡಲಿಲ್ಲ. ಈ ಬಗ್ಗೆ ಕೊರಗು ಅವರಲ್ಲಿತ್ತು’ ಎಂದು ಸ್ಮರಿಸಿಕೊಂಡರು.
ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದ ವಿಮರ್ಶಕ ಎಚ್. ದಂಡಪ್ಪ, ‘ಸಮಾಜದಲ್ಲಿ ಅಸಮಾನತೆ ಹಾಗೂ ಜಾತೀಯತೆ ತೊಲಗಬೇಕಾದರೆ ಅಂತರ್ಜಾತಿ ವಿವಾಹಗಳು ಹೆಚ್ಚು ನಡೆಯಬೇಕು. ಸ್ತ್ರೀಯರು ಸಮಾಜ ಕಟ್ಟುವ ಹಾಗೂ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದು, ಈಗಾಗಲೇ ಬಹುತೇಕ ಎಲ್ಲ ರಂಗಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
ಕನ್ನಡ ಪರ ಹೋರಾಟಗಾರ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಅಧ್ಯಕ್ಷ ಎ.ಎಸ್.ನಾಗರಾಜಸ್ವಾಮಿ, ಪ್ರಧಾನ ಕಾರ್ಯದರ್ಶಿ ತಾ.ಸಿ.ತಿಮ್ಮಯ್ಯ, ಕಾರ್ಯದರ್ಶಿ ಇಂದಿರಾ ಶರಣ್ ಜಮ್ಮಲದಿನ್ನಿ ಉಪಸ್ಥಿತರಿದ್ದರು.
ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಅನುಪಮಾ ನಿರಂಜನ ಹೆಸರಿನ ಪ್ರಶಸ್ತಿ ದೊರೆತಿರುವುದು ಖುಷಿ ತಂದಿದೆಡಾ. ವಿಜಯಲಕ್ಷ್ಮೀ ದೇಶಮಾನೆ ಪ್ರಶಸ್ತಿ ಪುರಸ್ಕೃತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.