ಕೆ.ಆರ್. ಪುರ: ಸಮೀಪದ ದೇವಸಂದ್ರ ಮುಖ್ಯರಸ್ತೆಯ ಕಾವೇರಿ ಬೇಕರಿ ಹಿಂಭಾಗದಲ್ಲಿರುವ ಮಂಜುನಾಥ ಬಡಾವಣೆಗೆ ಪೊರೈಕೆಯಾಗುತ್ತಿರುವ ಕಾವೇರಿ ನೀರು ದುರ್ವಾಸನೆಯಿಂದ ಕೂಡಿದೆ ಎಂದು ನಾಗರಿಕರು ದೂರಿದ್ದಾರೆ.
‘ಮೂರು ತಿಂಗಳಿನಿಂದ ನೀರು ಇದೇ ರೀತಿ ವಾಸನೆ ಬರುತ್ತಿದೆ. ಕುಡಿಯುವುದಕ್ಕಲ್ಲದೇ ಬೇರೆ ಕೆಲಸಗಳಿಗೆ ಬಳಸಲೂ ಯೋಗ್ಯವಾಗಿಲ್ಲ’ ಎಂದು ಸ್ಥಳೀಯರು ಹೇಳುತ್ತಾರೆ. ‘ಇಂಥ ನೀರು ಬಳಸುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂಬುದು ಅವರ ಆತಂಕವಾಗಿದೆ.
‘ಸಂಪ್ ಮತ್ತು ಮನೆಯ ನೀರಿನ ಟ್ಯಾಂಕ್‌ಗಳಲ್ಲಿ ಸಂಗ್ರಹಿಸುವ ಕಾವೇರಿ ನೀರಿನಿಂದಲೂ ದುರ್ವಾಸನೆ ಬರುತ್ತಿದೆ. ಇದರಿಂದಾಗಿ ವಾರಕ್ಕೊಮ್ಮೆ ನೀರಿನ ಟ್ಯಾಂಕ್ ಮತ್ತು ಸಂಪ್‌ಗಳನ್ನು ಸ್ವಚ್ಚಗೊಳಿಸುತ್ತಿದ್ದೇವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುರೇಶ್.
‘ಈ ಸಮಸ್ಯೆಯನ್ನು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದು, ಪರಿಹರಿಸುವಂತೆ ಮನವಿ ಮಾಡಿದ್ದೇವೆ. ಆದರೆ, ಏನೂ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯ ನಿವಾಸಿ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
‘ಶಾಸಕ ಬೈರತಿ ಬಸವರಾಜ ಅವರು ಕಾರ್ಯಕ್ರಮವೊಂದಕ್ಕೆ ಇಲ್ಲಿಗೆ ಭೇಟಿ ನೀಡಿದ್ದಾಗ, ಈ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದೆವು. ಆಗ ಅವರು ಸ್ಥಳದಲ್ಲಿಯೇ ಜಲಮಂಡಳಿ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸುವಂತೆ ತಾಕೀತು ಮಾಡಿದ್ದರು. ಈವರೆಗೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಸ್ಥಳೀಯ ನಿವಾಸಿಗಳು ದೂರಿದರು.
ಸಮಸ್ಯೆ ಕುರಿತು ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೆಂಕಟರಮಣ ಅವರನ್ನು ಕೇಳಿದಾಗ, ‘ಕಲುಷಿತ ನೀರು ಬರುತ್ತಿದೆ ಎಂದು ಹೇಳಿದ್ದಾರೆ. ಆದರೆ, ಈ ಸಂಬಂಧ ಲಿಖಿತವಾಗಿ ದೂರು ಬಂದಿಲ್ಲ’ ಎಂದು ಉತ್ತರ ನೀಡಿದರು. ಕಾರ್ಯಪಾಲಕ ಎಂಜಿನಿಯರ್ ಚನ್ನಬಸವಯ್ಯ ಅವರು, ‘ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಮಸ್ಯೆ ಪರಿಹರಿಸುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.