ADVERTISEMENT

ಕೆಲಸಗಾರ ಆತ್ಮಹತ್ಯೆ: ವಿಷಯ ಮುಚ್ಚಿಟ್ಟು ಅಂತ್ಯಸಂಸ್ಕಾರ

ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಘಟನೆ l ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 4:52 IST
Last Updated 8 ಫೆಬ್ರುವರಿ 2023, 4:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಕೆಲಸಗಾರ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಗತಿ ಮುಚ್ಚಿಟ್ಟು ಅಂತ್ಯಕ್ರಿಯೆ ಮಾಡಿದ್ದ ಗುಜರಿ ವ್ಯಾಪಾರಿ ಸೇರಿ ಇಬ್ಬರನ್ನು ಕಾಡುಗೋಡಿ ಠಾಣೆ ಪೊಲೀಸರು
ಬಂಧಿಸಿದ್ದಾರೆ.

‘ಎರಡು ತಿಂಗಳು ಸಂಬಳ ಸಿಗದಿದ್ದರಿಂದ ನೊಂದಿದ್ದ ಕೆಲಸಗಾರ ಎಂ.ಡಿ. ರಸೂಲ್ ಹೌಲಾದಾರ್ (30) ಜ. 14ರಂದು ಲುಂಗಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ಸಂಗತಿ ಮುಚ್ಚಿಟ್ಟಿದ್ದ ಗುಜರಿ ವ್ಯಾಪಾರಿ ಮೊಹಮ್ಮದ್ ರಂಜಾನ್ (40), ಕೆಲಸಗಾರ ರಸಲ್ (24) ಎಂಬಾತನ ಸಹಾಯದಿಂದ ಅಂತ್ಯಕ್ರಿಯೆ ಮಾಡಿಸಿದ್ದ’ ಎಂದು ಪೊಲೀಸರು ಹೇಳಿದರು.

‘ರಸೂಲ್ ಅವರದ್ದು ಆತ್ಮಹತ್ಯೆ ಎಂಬುದು ಗೊತ್ತಾಗುತ್ತಿದ್ದಂತೆ ಕುಟುಂಬಸ್ಥರು ದೂರು ನೀಡಿದ್ದರು. ರಸೂಲ್ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಡಿ ಮೊಹಮ್ಮದ್ ರಂಜಾನ್ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ರಸಲ್‌ನನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಸಂಬಳ ಕೇಳಿದ್ದಕ್ಕೆ ಹಲ್ಲೆ: ‘ಪಶ್ಚಿಮ ಬಂಗಾಳದ ಎಂ.ಡಿ. ರಸೂಲ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಸಿಗೇಹಳ್ಳಿಯಲ್ಲಿ ವಾಸವಿದ್ದರು. ಆರೋಪಿ ಮೊಹಮ್ಮದ್ ರಂಜಾನ್ ಗುಜರಿ ಮಳಿಗೆಯಲ್ಲಿ ಕೆಲಸಕ್ಕೆ ಸೇರಿದ್ದರು. ಸೈಕಲ್‌ನಲ್ಲಿ ಸುತ್ತಾಡಿ ಪ್ಲ್ಯಾಸ್ಟಿಕ್ ಸಂಗ್ರಹಿಸಿ ತರುವುದು ರಸೂಲ್ ಕೆಲಸವಾಗಿತ್ತು’ ಎಂದು ಪೊಲೀಸರು ಹೇಳಿದರು.

‘ರಸೂಲ್ ಅವರು ಪ್ರತಿ ತಿಂಗಳು ಸಂಬಳ ಬರುತ್ತಿದ್ದಂತೆ ಪತ್ನಿಗೆ ಹಣ ಕಳುಹಿಸುತ್ತಿದ್ದರು. ಆದರೆ, ಎರಡು ತಿಂಗಳಿನಿಂದ ಅವರಿಗೆ ಸಂಬಳ ಬಂದಿರಲಿಲ್ಲ. ಪತ್ನಿಗೆ ಹಣ ಕಳುಹಿಸಲು ಸಾಧ್ಯವಾಗಿರಲಿಲ್ಲ’ ಎಂದು
ತಿಳಿಸಿದರು.

‘ಜ. 14ರಂದು ಮೊಹಮ್ಮದ್ ರಂಜಾನ್ ಬಳಿ ತೆರಳಿದ್ದ ರಸೂಲ್, ಸಂಬಳ ನೀಡುವಂತೆ ಕೋರಿದ್ದರು. ಸಿಟ್ಟಾಗಿದ್ದ ರಂಜಾನ್,
‘ನೀನು ಅಯೋಗ್ಯ. ನಿನಗೆ ಕೆಲಸ ಕೊಟ್ಟಿರು ವುದೇ ಹೆಚ್ಚು. ಸಂಬಳ ಕೇಳುತ್ತಿಯಾ’ ಎಂದು ಬೈದು ಹಲ್ಲೆ ಮಾಡಿದ್ದ. ಇದರಿಂದ ನೊಂದ ಎಂ.ಡಿ.ರಸೂಲ್ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಹೇಳಿದರು.

‘ರಸೂಲ್ ಆತ್ಮಹತ್ಯೆ ಪ್ರಕರಣದಲ್ಲಿ ತಾನು ಜೈಲಿಗೆ ಹೋಗಬಹುದೆಂದು ತಿಳಿಸಿದ್ದ ಮೊಹಮ್ಮದ್ ರಂಜಾನ್, ಮೃತದೇಹವನ್ನು ಮುಸ್ಲಿಂ ವಿಧಿ–ವಿಧಾನದಂತೆ ಅಲಂಕರಿಸಿ ಖಾಜಿಸೊನ್ನೇನಹಳ್ಳಿಯ ಖಬರಸ್ತಾನ್‌ಕ್ಕೆ ತೆಗೆದುಕೊಂಡು ಹೋಗಿದ್ದ. ಅಲ್ಲಿಯ ಸಿಬ್ಬಂದಿಗೂ ಸುಳ್ಳು ಹೇಳಿ ಅಂತ್ಯಕ್ರಿಯೆ ಮಾಡಿದ್ದ’ ಎಂದು
ತಿಳಿಸಿದರು.

ಹೂತಿಟ್ಟಿದ್ದ ಮೃತದೇಹ ಹೊರಕ್ಕೆ: ‘ಹೂತಿಟ್ಟಿದ್ದ ಎಂ.ಡಿ. ರಸೂಲ್ ಅವರ ಮೃತದೇಹವನ್ನು ನ್ಯಾಯಾಲಯದ ಅನುಮತಿಯಂತೆ ತಹಶೀಲ್ದಾರ್ ಸಮ್ಮುಖದಲ್ಲಿ ಹೊರಗೆ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಮುಗಿಸಿ, ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.