ADVERTISEMENT

ಅಪೌಷ್ಟಿಕ ಮಕ್ಕಳ ಸಂಖ್ಯೆಗೆ ಸಮೀಕ್ಷೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 8:10 IST
Last Updated 24 ಏಪ್ರಿಲ್ 2012, 8:10 IST

ಬೀದರ್: ರಾಜ್ಯದಲ್ಲಿ ಪೌಷ್ಟಿಕಯುಕ್ತ ಆಹಾರದ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಖಚಿತ ಸಂಖ್ಯೆ ತಿಳಿಯಲು ಹೊಸದಾಗಿ ಸಮೀಕ್ಷೆಯನ್ನು ನಡೆಸಬೇಕಾದ ಅಗತ್ಯವಿದೆ. ಇದು ಸೇರಿದಂತೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ಬರುವ ಜೂನ್ 15ರಂದು ವರದಿ ಸಲ್ಲಿಸಲಾಗುವುದು ಎಂದು ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಹೇಳಿದರು.

ಜಿಲ್ಲೆಯಲ್ಲಿ ಮಕ್ಕಳಿಗೆ ಪೌಷ್ಟಿಕಯುಕ್ತ ಆಹಾರ ಒದಗಿಸಲು ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಥ ಸಮಸ್ಯೆಯ ಬಗೆಗೆ ಸಾರ್ವಜನಿಕರ ದೂರು ಆಲಿಸಲು ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡುವ ಸಹಾಯವಾಣಿ ಆರಂಭಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಪೌಷ್ಟಿಕಯುಕ್ತ ಮಕ್ಕಳ ಸಂಖ್ಯೆ ಎಷ್ಟು ಎಂಬುದು ಅಸ್ಪಷ್ಟವಾಗಿದೆ. ಪ್ರಸ್ತುತ, ರಾಯಚೂರು, ಯಾದಗಿರಿ, ಗುಲ್ಬರ್ಗ, ಬಾಗಲಕೋಟೆ, ಬೀದರ್, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಇಂಥ ಮಕ್ಕಳ ಸಂಖ್ಯೆ ಹೆಚ್ಚು ಇದೆ. ಈ ಬಗೆಗೆ ವರದಿ ಸಲ್ಲಿಸುವ ಮೊದಲು ವಿಭಾಗೀಯ ಮಟ್ಟದಲ್ಲಿಯೂ ಸಭೆ ನಡೆಸಲಾಗುವುದು ಎಂದರು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಪೌಷ್ಟಿಕಯುಕ್ತ ಆಹಾರದಿಂದ ಮಕ್ಕಳು ಬಳಲುತ್ತಿರುವ  ಕುರಿತು ದೃಶ್ಯ ಮಾಧ್ಯಮ ವರದಿ ಆಧರಿಸಿ ಬಂದ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ ಪರಿಣಿಸಿದ ಮುಖ್ಯ ನ್ಯಾಯಮೂರ್ತಿಗಳು, ತಮ್ಮ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಆ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಲಾಗುತ್ತಿದೆ ಎಂದರು.

 ಇದೇ 26ರಂದು ಗುಲ್ಬರ್ಗ, 30ರಂದು ಬೆಳಗಾವಿ ಮತ್ತು ಮೇ 3ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಪ್ರಸ್ತುತ ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸಲು ಅಂಗನವಾಡಿಗಳ ಮೂಲಕ ನೀಡುತ್ತಿರುವ ಆಹಾರ ವ್ಯವಸ್ಥೆಯಲ್ಲಿಯೇ ಲೋಪವಿದೆ. ಭೌಗೋಳಿಕ ಪ್ರದೇಶವನ್ನು ಗಣನೆಗೆ ತೆಗೆದುಕೊಂಡು, ಪೌಷ್ಟಿಕಾಂಶವು ಹೆಚ್ಚಿರುವ ಆಹಾರಗಳನ್ನು ನೀಡಬೇಕಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಪ್ರಸ್ತುತ ಒಂದು ವರದಿಯ ಪ್ರಕಾರ 58,000, ಇನ್ನೊಂದು ವರದಿ ಅನುಸಾರ 68,000 ಸಾವಿರ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಎನ್‌ಜಿಒ ಒಂದು ಇಂಥ ಮಕ್ಕಳ ಸಂಖ್ಯೆ 71 ಸಾವಿರ ಇದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಖಚಿತ ಸಂಖ್ಯೆ ತಿಳಿಯಲು ಹೊಸದಾಗಿ ಸಮೀಕ್ಷೆ ನಡೆಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಮಟ್ಟದಲ್ಲಿ ಸಮಿತಿ: ಜಿಲ್ಲಾ ಮಟ್ಟದಲ್ಲಿ ಪೌಷ್ಟಿಕಯುಕ್ತ ಆಹಾರ ವಿತರಣೆ , ಸಮಸ್ಯೆ ನಿವಾರಣೆಗೆ ಕೈಗೊಂಡಿರುವ ಕ್ರಮಗಳನ್ನು ತಿಳಿಯಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಪರಿಹಾರ ಕ್ರಮಗಳನ್ನು ಚರ್ಚಿಸಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಸಹಾಯವಾಣಿಯನ್ನು ಜಿಲ್ಲೆಯಲ್ಲಿ ಆರಂಭಿಸಿದೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ ದಿನದ ಇಪ್ಪತ್ನಾಲ್ಕು ಗಂಟೆ ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿ (08482-229688) ಇದ್ದು, ಪೌಷ್ಟಿಕ ಆಹಾರದ ಕೊರತೆಯಿಂದ ಮಕ್ಕಳು ಬಳಲುತ್ತಿರುವ ಕುರಿತು ಮಾಹಿತಿಯನ್ನು ಸಾರ್ವಜನಿಕರಿಂದ ಪಡೆಯಲು ಈ ಸಹಾಯವಾಣಿಯ ನೆರವನ್ನು ಪಡೆಯಬಹುದು ಎಂದು ಅವರು ತಿಳಿಸಿದರು.

ಪ್ರಸ್ತುತ ಅಂಗನವಾಡಿ ಕೇಂದ್ರಗಳಲ್ಲಿ ನೀಡುತ್ತಿರುವ ಆಹಾರವನ್ನೇ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೂ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭೌಗೋಳಿಕ ಪ್ರದೇಶವನ್ನು ಆಧರಿಸಿ ಮಕ್ಕಳ ಆಹಾರ ಪದ್ಧತಿಯ ಬಗೆಗೂ ಸವಿವರ ವರದಿಯನ್ನು ಸಲ್ಲಿಸಲು ಕೋರಲಾಗಿದೆ ಎಂದರು.

ಎಲ್ಲ ಮಕ್ಕಳು ಒಂದೇ ರೀತಿಯ ಅಪೌಷ್ಟಿಕತೆಯಿಂದ ನರಳಲು ಸಾಧ್ಯವಿಲ್ಲ. ಹೀಗಾಗಿ, ಇಂಥ ಪ್ರತಿ ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಬೇಕು. ಸಮಗ್ರ ವೈದ್ಯಕೀಯ ತಪಾಸಣೆ ಜಿಲ್ಲಾ ಸರ್ಜನ್ ಅವರ ನೇತೃತ್ವದಲ್ಲಿ ನಡೆಸಿ ಪ್ರತ್ಯೇಕ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಸಮೀರ್ ಶುಕ್ಲ, ಜಿಲ್ಲಾ ಪಂಚಾಯಿತಿ ಸಿಇಒ ಮೀರ್ ಅನೀಸ್ ಅಹ್ಮದ್ ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.