ADVERTISEMENT

ಉಂಡಾಡಿಗಳ ಕೇಂದ್ರವಾದ ಸರ್ಕಾರಿ ಕಟ್ಟಡ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2011, 8:05 IST
Last Updated 26 ನವೆಂಬರ್ 2011, 8:05 IST
ಉಂಡಾಡಿಗಳ ಕೇಂದ್ರವಾದ ಸರ್ಕಾರಿ ಕಟ್ಟಡ
ಉಂಡಾಡಿಗಳ ಕೇಂದ್ರವಾದ ಸರ್ಕಾರಿ ಕಟ್ಟಡ   

ಹುಮನಾಬಾದ್: ತಾಲ್ಲೂಕಿನ ಸಿತಾಳಗೇರಾ ಗ್ರಾಮದಲ್ಲಿ ಕಳೆದ ಎರಡು ದಶಕದ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ಕಟ್ಟಡ ನಿರ್ವಹಣೆ ಕೊರತೆ ಕಾರಣ ಉಂಡಾಡಿಗಳ ಕೇಂದ್ರವಾಗಿ ಮಾರ್ಪಟ್ಟಿದೆ.

ಮೂಲಗಳ ಪ್ರಕಾರ ಕರಕುಶಲಕರ್ಮಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಈ ಕಟ್ಟಡವನ್ನು ಕೈಗಾರಿಕಾ ಇಲಾಖೆ ನಿರ್ಮಿಸಿತ್ತು. ನಿರ್ಮಾಣಗೊಂಡ ಕೇವಲ ಒಂದು ವರ್ಷ ಮಾತ್ರ ಇಲ್ಲಿ ತರಬೇತಿ ನಡೆದಿರುವುದು ಗೊತ್ತಿದೆ.

ತದನಂತರ ಈ ಕಟ್ಟಡದಲ್ಲಿ ಪಂಚಾಯಿತಿ ಕಚೇರಿ ನಡೆಯುತ್ತಿತ್ತು. ಆ ಬಳಿಕ ನಿರ್ವಹಣೆ ಕೊರತೆಯಿಂದ  ಕ್ರಮೇಣ ಈ ಕಟ್ಟಡ ಸಂಪೂರ್ಣ ಹಾಳುಬಿದ್ದಿದೆ ಎನ್ನುವುದು ಗ್ರಾಮದ ಪ್ರಜ್ಞಾವಂತರ ಅಭಿಪ್ರಾಯ.

ಸರ್ಕಾರಿ ಕಟ್ಟಡ ಕೇವಲ ನಾಮ್ಕೆವಾಸ್ತೆ ಎಂಬಂತಿದೆ. ಮೇಲ್ವಿಚಾರಣೆ ನಡೆಸುವ ಅಧಿಕಾರಿಗಳು ಕಟ್ಟಡದತ್ತ ಗಮನಹರಿಸದ ಕಾರಣ ಈ ಕಟ್ಟಡ ಸದ್ಯ ಗ್ರಾಮದ ಉಂಡಾಡಿಗಳ ಪಾಲಿಗೆ ಜೂಜು ಕೇಂದ್ರವಾಗಿ ಮಾರ್ಪಟ್ಟಿದೆ.

ರಾತ್ರಿ ಹಾಗೂ ನಸುಕಿನ ಜಾವ ಗ್ರಾಮದಲ್ಲಿನ ಮಹಿಳೆಯರು ಶೌಚಾಲಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಮೂಲ ಒಂದರ ಪ್ರಕಾರ ಇಲ್ಲಿ ಅನೈತಿಕ ಚಟುವಟಿಕೆ ಸಹ ನಡೆಯುತ್ತವೆ ಎಂದು ಗ್ರಾಮದ ಹೆಸರು ಹೇಳಲಿಚ್ಚಿಸದ ಸಾರ್ವಜನಿಕರ ಆರೋಪ.

ಕಟ್ಟಡ ಮೇಲಿನ ಹಂಚು ಒಡೆದಿವೆ. ಕೋಣೆ ಬಾಗಿಲು ಮುರಿದಿವೆ. ಸುತ್ತಲು ಸಿಕ್ಕಾಪಟ್ಟೆ ಹುಲ್ಲು ಬೆಳೆದಿದೆ.
ಕಟ್ಟಡ ನಿರ್ಮಿಸುವುದರ ಹಿಂದೆ ಸರ್ಕಾರದ ಉದ್ದೇಶ ಒಳ್ಳೆಯದೆ ಆಗಿದೆ. ಆದರೆ ಅಲ್ಲಿ ಈಗ ನಡೆಯುತ್ತಿರುವುದಾದರೂ ಏನು ? ಅದರ ಸ್ಥಿತಿ ಹೇಗಿದೆ ? ಎಂಬ ಬಗ್ಗೆ ಯಾರೊಬ್ಬರು ಚಿಂತಿಸದೆ ಇರುವುದು ನೋವಿನ ಸಂಗತಿ ಎನ್ನುವುದು ಗ್ರಾಮಸ್ಥರ ಅಂಬೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.