ADVERTISEMENT

ಕೊಲೆ ಪ್ರಕರಣ: ಮಹಿಳೆ ಸೇರಿ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 10:27 IST
Last Updated 19 ಡಿಸೆಂಬರ್ 2012, 10:27 IST

ಬೀದರ್: ಆಂಧ್ರದ ಯುವಕರಿಬ್ಬರನ್ನು ಬೀದರ್ ತಾಲ್ಲೂಕಿನ ಮನ್ನಳ್ಳಿ ಶಿವಾರಕ್ಕೆ ಕರೆತಂದು ಕತ್ತು ಕೊಯ್ದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತ್ಯಾಗರಾಜನ್ ತಿಳಿಸಿದ್ದಾರೆ.

ನೆರೆಯ ಆಂಧ್ರಪ್ರದೇಶದ ಮೆದಕ್ ಜಿಲ್ಲೆಯ ಪುಲಕಲ್ ಮಂಡಲ ವ್ಯಾಪ್ತಿಯ ಇಸೋಜಿಪೇಟ್ ನಿವಾಸಿ ಕುಲಸುಮ್‌ಬಿ, ಮಹಮ್ಮದ್ ಸಲಾವುದ್ದೀನ್, ಮಹಮ್ಮದ್ ಇಸ್ಮಾಯಿಲ್, ಪ್ರೇಮಸಾಗರ್, ಫಟ್ರಿ ಅಲಿಯಾಸ್ ಮಹೆಬೂಬ್ ಅಲಿ ಬಂಧನಕ್ಕೊಳಗಾದವರು.
ಬಂಧಿತರಿಂದ ಕೊಲೆಗೆ ಬಳಸಲಾದ ಚಾಕು ಹಾಗೂ ಆಟೋ ವಶ ಪಡಿಸಿಕೊಳ್ಳಲಾಗಿದೆ.

ಕಳೆದ ಅಕ್ಟೋಬರ್ 18ರ ರಾತ್ರಿ ಯಾರೋ ಅಪರಿಚಿತರು ತಾಲ್ಲೂಕಿನ ಮನ್ನಳ್ಳಿ ಶಿವಾರದ ಬರೂರು- ಬಗದಲ್ ರಸ್ತೆ ಬಳಿ ಇರುವ ಮಹೆಮೂದ್ ಖುರೇಶಿ ಎಂಬುವರ ಹೊಲದ ಪಕ್ಕದಲ್ಲಿ ಅಪರಿಚಿತ ಯುವಕರಿಬ್ಬರನ್ನು ಕುತ್ತಿಗೆ ಕೊಯ್ದು ಹತ್ಯೆಗೈದು ಪರಾರಿಯಾಗಿದ್ದರು. ಈ ಸಂಬಂಧ ಬಗದಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೃತ್ಯ ನಡೆದ ತಿಂಗಳ ಬಳಿಕ ಮೃತ ಯುವಕರನ್ನು ಆಂಧ್ರ ಪ್ರದೇಶದ ಮೆದಕ್ ಜಿಲ್ಲೆಯ ಪುಲಕಲ್ ಮಂಡಲದ ಇಸೋಜಿಪೇಟ್ ಗ್ರಾಮದ ನಾಯಿಕೋಟಿ ವೆಂಕಟೇಶಂ ಆಂಜನೇಯ (19) ಮತ್ತು ಬೋಯಿನಿ ಮಲ್ಲೇಶಂ ಪಾಪಯ್ಯ (16) ಎಂದು ಗುರುತಿಸಲಾಗಿತ್ತು.
ಪೊಲೀಸರ ಪ್ರಕಾರ,  ಮೃತ ಯುವಕ ವೆಂಕಟ ಅಲಿಯಾಸ್ ವೆಂಕಟೇಶಂ ಅದೇ ಗ್ರಾಮದ ಯಾಸ್ಮಿನ್ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇದುವೇ ಕೊಲೆಗೆ ಕಾರಣ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

ವೆಂಕಟೇಶಂ ಯಾಸ್ಮಿನ್‌ಳನ್ನು ಪ್ರೀತಿಸುತ್ತಿರುವ ವಿಷಯ ಆಕೆಯ ತಾಯಿ ಕುಲಸುಮ್‌ಬಿಗೆ ಗೊತ್ತಾಗಿತ್ತು. ಬಳಿಕ ಆಕೆ ಸಲಾವುದ್ದೀನ್ ಎಂಬಾತನಿಗೆ ವಿಷಯ ತಿಳಿಸಿದ್ದಳು.

ಸಲಾವುದ್ದೀನ್ ಹಾಗೂ ಆತನ ಸಹಚರರಾದ ಮಹಮ್ಮದ್ ಇಸ್ಮಾಯಿಲ್, ಪ್ರೇಮಸಾಗರ್ ಹಾಗೂ ಫಟ್ರಿ ಅಲಿಯಾಸ್ ಮಹೆಬೂಬ್ ಅಲಿ ಸೇರಿ ಕೊಲೆಗೆ ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.

ಬಳಿಕ ಯಾಸ್ಮಿನ್ ಜೊತೆಗೆ ಮದುವೆ ಮಾಡಿಸುವುದಾಗಿ ಕುಲಸುಮ್‌ಬಿ ಮೂಲಕ ವೆಂಕಟೇಶಂಗೆ ತಿಳಿಸಲಾಗಿತ್ತು. ವೆಂಕಟೇಶಂನನ್ನು ಆಟೋದಲ್ಲಿ ಜಹೀರಾಬಾದ್‌ಗೆ ಕರೆ ತಂದು, ಆತ ಹಾಗೂ ಆತನೊಂದಿಗೆ ಬಂದಿದ್ದ ಮಲ್ಲೆೀಶಂಗೆ ಮದ್ಯ ಕುಡಿಸಿ ಬರೂರು- ಬಗದಲ್ ರಸ್ತೆ ಬಳಿ ಕರೆತರಲಾಗಿತ್ತು. ವೆಂಕಟೇಶಂನನ್ನು ಕತ್ತು ಕೊಯ್ದು ಕೊಲೈಗೈದ ಬಳಿಕ, ವಿಷಯ ಗ್ರಾಮಸ್ಥರಿಗೆ ತಿಳಿಸಬಹುದು ಎಂದು ಆತನ ಜೊತೆಗಿದ್ದ ಮಲ್ಲೇಶಂನನ್ನು ಸಹ ಹತ್ಯೆಗೈಯಲಾಗಿತ್ತು ಎಂದು ವಿವರಿಸಿದ್ದಾರೆ.

ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಆನಂದ ಕಬ್ಬೂರಿ, ಬಸವರಾಜ ತೇಲಿ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ದಿಲೀಪ್ ಸಾಗರ್, ಅಸಿಸ್ಟಿಂಟ್ ಸಬ್ ಇನ್‌ಸ್ಪೆಕ್ಟರ್ ಪ್ರಭಾಕರ, ಮುಖ್ಯ ಪೇದೆಗಳಾದ ಶೊಹೇಬ್ ರೂಪಾ, ಪೇದೆಗಳಾದ ಅಶೋಕ್ ಕೋಟೆ, ಕಿಶನ್, ನೀಲಕಂಠ, ಡೇವಿಡ್, ಹಾವಗಿರಾವ್, ಧೂಳಪ್ಪ, ಶ್ರೀನಿವಾಸ ಕುಲಕರ್ಣಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.

ಅಪಘಾತ: ದಂಪತಿ ಸಾವು
ಬೀದರ್: ರಸ್ತೆ ಪಕ್ಕದಲ್ಲಿ ನಿಂತ ಕಬ್ಬಿನ ಲಾರಿಗೆ ಕಾರು ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ  ಮೃತಪಟ್ಟ ಘಟನೆ ನಗರದ ಹೊರವಲಯದ ಭಾಲ್ಕಿ-ನೌಬಾದ್ ರಸ್ತೆಯಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದೆ.

ಭಾಲ್ಕಿಯ ಮಹಮ್ಮದ್ ಅಜಮತ್ ನಗರದ ನೂರ್‌ಖಾನ್ ತಾಲೀಂ ಬಡಾವಣೆಯ ನಿವಾಸಿ ಮಹಮ್ಮದ್ ಅಜಮತ್ (30), ಅವರ ಪತ್ನಿ  ಸಮೀನಾ ಬೇಗಂ (26) ಮೃತಪಟ್ಟವರು.

ಅಪಘಾತದಲ್ಲಿ ದಂಪತಿಯ ಮೂವರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಪತ್ನಿ ಹಾಗೂ ಮಕ್ಕಳೊಂದಿಗೆ ಭಾಲ್ಕಿಯಲ್ಲಿ ನಡೆದ ಕುಟುಂಬದ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಕಾರಿನಲ್ಲಿ ಬೀದರ್‌ಗೆ ಮರಳುವಾಗ ಅಪಘಾತ ಸಂಭವಿಸಿದೆ.

ಬೀದರ್ ಸಂಚಾರ ವಿಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT