ADVERTISEMENT

ಗಡಿ ಶಾಲೆಗಳಿಗೆ ಶೈಕ್ಷಣಿಕ ತಜ್ಞರ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 8:55 IST
Last Updated 20 ಮಾರ್ಚ್ 2011, 8:55 IST

ಔರಾದ್: ಜಿಲ್ಲಾ ಮಟ್ಟದ ಸಂಶೋಧನಾ ಸಲಹಾ ಸಮಿತಿ ತಂಡದ ಅಧಿಕಾರಿಗಳು ಈಚೆಗೆ ತಾಲ್ಲೂಕಿನ ಗಡಿ ಭಾಗದ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿಯ ಶೈಕ್ಷಣಿಕ ಪ್ರಗತಿ ಮತ್ತು ಮೂಲ ಸೌಲಭ್ಯಗಳ ಕುರಿತು ಮಾಹಿತಿ ಕಲೆ ಹಾಕಿದರು.ಸಂಶೋಧನೆ, ಮೌಲ್ಯಮಾಪನ, ಉಸ್ತುವಾರಿ ಮತ್ತು ಮೇಲ್ವಿಚಾರಣೆ (ಆರ್.ಇ.ಎಂ.ಎಸ್.) ಯೋಜನೆಯಡಿ ಸರ್ಕಾರದ ನಿರ್ದೇಶನದ  ಮೇರೆಗೆ ಗಡಿ ಭಾಗದ ಶಾಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಚಂದ್ರಶೇಖರ ತಿಳಿಸಿದ್ದಾರೆ.

ಸುತ್ತಲೂ ಮಹಾರಾಷ್ಟ್ರ ಸುತ್ತುವರಿದು ನಡು ಗಡ್ಡೆಯಂತಿರುವ ಚೊಂಡಿಮುಖೇಡ್ ಗ್ರಾಮಕ್ಕೆ ಭೇಟಿ ನೀಡಿದ ತಂಡ ಅಲ್ಲಿಯ ಶಿಕ್ಷಕರು, ಪಾಲಕರು ಮತ್ತು ಮಕ್ಕಳೊಂದಿಗೆ ಶಿಕ್ಷಣದ ಸ್ಥಿತಿಗತಿ ಕುರಿತು ಸುದೀರ್ಘವಾಗಿ ಸಮಾಲೋಚಿಸಿದರು.ಜಿಲ್ಲಾ ಕೇಂದ್ರದಿಂದ 75 ಕಿ.ಮೀ. ಮತ್ತು ಔರಾದ್ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ. ದೂರದಲ್ಲಿರುವ ಚೊಂಡಿಮುಖೇಡ್ ಸುತ್ತಮುತ್ತ ಮಹಾರಾಷ್ಟ್ರ ಇರುವ ಜಿಲ್ಲೆಯ ಏಕೈಕ ಗ್ರಾಮ ಇದಾಗಿದೆ. 2 ಕಿ.ಮೀ. ವ್ಯಾಪ್ತಿಯ ಈ ಗ್ರಾಮದಲ್ಲಿ ಒಟ್ಟು 400 ಮನೆಗಳಿದ್ದು, 1600 ಜನಸಂಖ್ಯೆ ಇದೆ. ಇಲ್ಲಿ ಶೇ. 80 ಜನರು ಮರಾಠಿ ಮಾತನಾಡುವವರಿದ್ದು, ಶೇ. 20ರಷ್ಟು ಜನರಿಗೆ ಮಾತ್ರ ಅಲ್ಪಸ್ವಲ್ಪ ಕನ್ನಡ ಗೊತ್ತಿದೆ.

ಕುಡಿಯುವ ನೀರು, ರಸ್ತೆ ಮತ್ತಿತರೆ ಮೂಲ ಸೌಲಭ್ಯ ಈ ಗ್ರಾಮಕ್ಕೆ ಕಲ್ಪಿಸಲಾಗಿದೆ. ಕರ್ನಾಟಕ ಸರ್ಕಾರದಿಂದಲೇ ಇಲ್ಲಿ 8ನೇ ತರಗತಿ ವರೆಗೆ ಮರಾಠಿ ಮಾಧ್ಯಮ ಶಾಲೆ ತೆರೆಯಲಾಗಿದೆ. ಶಾಲೆಯಲ್ಲಿ 223 ಮಕ್ಕಳು ಓದುತ್ತಿದ್ದಾರೆ. ಕನ್ನಡ ಶಿಕ್ಷಕ ಸೇರಿದಂತೆ ಅಗತ್ಯವಿರುವಷ್ಟು ಶಿಕ್ಷಕರಿದ್ದಾರೆ. ಮಕ್ಕಳ ಶೈಕ್ಷಣಿಕ ಗುಣಮಟ್ಟ ಚನ್ನಾಗಿದೆ. ಆದರೆ ಶಾಲೆಗೆ ಕಂಪೌಂಡ ಗೋಡೆ ಮತ್ತಿತರೆ ಮೂಲ ಸೌಲಭ್ಯ ಕಲ್ಪಿಸುವಂತೆ ಪಾಲಕರು ಬೇಡಿಕೆ ಮಂಡಿಸಿದ್ದಾರೆ.

8ನೇ ತರಗತಿ ವರೆಗೆ ಇರುವ ಶಾಲೆಯಲ್ಲಿ 10ನೇ ವರೆಗೆ ಮೇಲ್ದರ್ಜೆಗೇರಿಸುವಂತೆ ಪಾಲಕರು ಅಧಿಕಾರಿಗಳಲ್ಲಿ ಕೇಳಿಕೊಂಡರು. ನಮ್ಮ ಮಕ್ಕಳು 8ನೇ ಪಾಸಾದ ನಂತರ 9ನೇ ಕಲಿಯಲು ಪಕ್ಕದ ಮಹಾರಾಷ್ಟ್ರದ ರಾವಣಕೋಳಾ ಶಾಲೆಗೆ ಪ್ರವೇಶ ಪಡೆಯುವುದು ಅನಿವಾರ್ಯವಾಗಿದೆ. ಇದರಿಂದ ನಮ್ಮ ಮಕ್ಕಳ ಮುಂದಿನ ಅಭ್ಯಾಸ, ನೌಕರಿ ಮೇಲೆ ಹೊಡೆತ ಬೀಳುತ್ತಿದೆ. ಆದ್ದರಿಂದ ಬರುವ ಶೈಕ್ಷಣಿಕ ವರ್ಷದಿಂದಲೇ ಪ್ರೌಢ ಶಾಲೆ ತೆರೆಯಬೇಕು. ಮತ್ತು 1ನೇ ತರಗತಿಯಿಂದ ಕನ್ನಡ ಮಾಧ್ಯಮ ಶಾಲೆ ಆರಂಭಿಸಬೇಕು. ಇದಕ್ಕಾಗಿ ಬೇಕಾದ ಜಮೀನು ಕೊಡಲು ಸಿದ್ಧ ಎಂದು ಗ್ರಾಮದ ವ್ಯಕ್ತಿಯೊಬ್ಬರು ತನ್ನ 2 ಎಕರೆ ಜಮೀನು ಶಾಲೆ ಹೆಸರಿಗೆ ಸ್ಥಳದಲ್ಲೇ ಬರೆದುಕೊಟ್ಟರು.

ಪ್ರಸಕ್ತ ಜೂನ್‌ನಿಂದ 1ನೇ ತರಗತಿಯಿಂದ ಕನ್ನಡ ಮಾಧ್ಯಮ ಶಾಲೆ ಆರಂಭಿಸುವುದು. ಮತ್ತು 8ನೇ ವರೆಗಿರುವ ಮರಾಠಿ ಮಾಧ್ಯಮ ಶಾಲೆ 9ನೇ ತರಗತಿ ವರೆಗೆ ಮೇಲ್ದರ್ಜೆಗೇರಿಸಲು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಚೊಂಡಿಮುಖೇಡ್ ಗ್ರಾಮದ ರಾವುಸಾಹೇಬ್ ತಿಳಿಸಿದ್ದಾರೆ.ಶಿಕ್ಷಣ ತಜ್ಞರಾದ ಬಿ.ಆರ್. ಕೊಂಡಾ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ, ಉಪನ್ಯಾಸಕ ಶಶಿಕಾಂತ ಮರ್ತುಳೆನಿವೃತ್ತ ಉಪನ್ಯಾಸಕ ಸುಬ್ರಮಣ್ಯಂ, ಡಯಟ್ ಉಪನ್ಯಾಸಕ ಟಿ.ಜಿ. ಹಾದಿಮನಿ, ನದಾಫ್, ವೆಂಕಟರಾವ, ಶಿಕ್ಷಣ ಸಂಯೋಜಕ ಬಿ.ಎನ್. ಡಿಗ್ಗಾವಿ. ಶಿವಾಜಿ ಗಾಘರೆ, ಉಮಾಕಾಂತ ಮಹಾಜನ, ಬಸವರಾಜ ಸ್ವಾಮಿ ಮತ್ತು ಸಹಾರ್ದ ಪ್ರತಿನಿಧಿಗಳು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.