ADVERTISEMENT

ದಂಪತಿ ಪ್ರಾಣ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 7:45 IST
Last Updated 7 ಆಗಸ್ಟ್ 2012, 7:45 IST

ಹುಮನಾಬಾದ್: ಪರಸ್ಪರ ಪ್ರೇಮಿಸಿ ವಿವಾಹವಾಗಿ, ಕ್ಷುಲ್ಲಕ ಕಾರಣಕ್ಕಾಗಿ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ನವವಿವಾಹಿತೆ ಮತ್ತು ಆಕೆಯ ಪತಿಯ ಪ್ರಾಣ ರಕ್ಷಿಸುವಲ್ಲಿ ಇಲ್ಲಿನ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದೆ.

ರೇಣುಕಾ ವಿಶ್ವನಾಥ ವಾಕಡೆ (19) ಬಾವಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ನವವಿವಾಹಿತ ಮಹಿಳೆ. ಬಸವಕಲ್ಯಾಣ ತಾಲ್ಲೂಕು ವಿಶ್ವನಾಥ ವಾಕಡೆ ಮತ್ತು ರೇಣುಕಾ ಪರಸ್ಪರ ಪ್ರೇಮಿಸಿ 2012ರ ಮೇ ತಿಂಗಳಲ್ಲಿ ವಿವಾಹವಾಗಿ ತಮ್ಮ ಮೂಲ ಉದ್ಯೋಗ ಬಾಂಡೆ ಮಾರುವ ವ್ಯಾಪಾರ ನಡೆಸುತ್ತಿದ್ದ ಇರುವ ಪಟ್ಟಣದ ಶಿವಚಂದ್ರ ನೆಲ್ಲೊಗಿ ಬಡಾವಣೆಯ ಪುಟ್ಟ ಗುಡಿಸಲಲ್ಲಿ ವಾಸವಾಗಿದ್ದಾರೆ.

ಇಬ್ಬರ ಮಧ್ಯೆ ಕ್ಷುಲ್ಲಕ ಕಾರಣದಿಂದ ವಾದವಿವಾದ ನಡೆದಿತ್ತು. ಅದರಿಂದ ಬೇಸತ್ತ ರೇಣುಕಾ ಸೋಮವಾರ ಬೆಳಿಗ್ಗೆ ಹುಮನಾಬಾದ್ ಮಿನಿ ವಿಧಾನಸೌಧ ಪಕ್ಕದ ವೀರಣ್ಣ ಪಾಟೀಲ ಅವರಿಗೆ ಸೇರಿದ ತೋಟದ ಬಾವಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಪತ್ನಿ ಪ್ರಾಣ ರಕ್ಷಿಸುವುದಕ್ಕಾಗಿ ವಿಶ್ವನಾಥ ಕೂಡಾ ಬೆನ್ನಲ್ಲೇ ಬಾವಿಗೆ ಜಿಗಿದರು. ಬಾವಿಗೆ ಜಿಗಿದ ಇಬ್ಬರು ಒಳಗಡೆ ಬೆಳೆದಿದ್ದ ಟೊಂಗೆಗೆ ಜೋತುಬಿದ್ದಿದ್ದರು.

ತೋಟದ ಪಕ್ಕದ ರಸ್ತೆ ಮುಖಾಂತರ ವಾಯುವಿಹಾರಕ್ಕೆ ತೆರಳುತ್ತಿದ್ದ ಕೆಲವರು ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಿದರು. ಆಸ್ಪತ್ರೆ ಸಿಬ್ಬಂದಿಯಿಂದ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಹಾಗೂ ವಾಜೀದ್ ಎಂಬಾತ ಸೇರಿ ಇಬ್ಬರ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಕುರಿತು ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.