ADVERTISEMENT

ಧರ್ಮಸಿಂಗ್‌ಗೆ ಟಿಕೆಟ್‌: ವಿರೋಧ

ಬೀದರ್‌: ಲೋಕಸಭಾ ಚುನಾವಣೆ­

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 6:14 IST
Last Updated 5 ಡಿಸೆಂಬರ್ 2013, 6:14 IST

ಬೀದರ್: ಲೋಕಸಭೆ ಚುನಾವಣೆ­ಯಲ್ಲಿ ಬೀದರ್‌ ಲೋಕಸಭಾ ಕ್ಷೇತ್ರದಿಂದ ಯಾವುದೇ ಕಾರಣಕ್ಕೂ ಧರ್ಮಸಿಂಗ್‌ ಅವರಿಗೆ ಟಿಕೆಟ್ ನೀಡಬಾರದು. ಸಂಸದರಾಗಿ  ಅವರು ಕ್ಷೇತ್ರದ ಅಭಿವೃದ್ಧಿಯನ್ನು ಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಚಂದ್ರಕಾಂತ ಸಿಂಧೋಲ ಆಗ್ರಹಿಸಿದ್ದಾರೆ.

ಈ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರಿಗೆ ಪತ್ರ ಬರೆದಿರುವ ಅವರು, ಸಂಸದರ ಅವಧಿಯಲ್ಲಿ ಜಿಲ್ಲೆಯಲ್ಲಿ ಮನೆ ಮಾಡದ ಅವರು, ಈಗ ಬರುವ ಚುನಾವಣೆ ದೃಷ್ಟಿಯಿಂದ ಮನೆ ಮಾಡಿದ್ದಾರೆ. ಅನೇಕ ಸಂಘ–ಸಂಸ್ಥೆಗಳು ಈಗಾಗಲೇ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ. ಕ್ಷೇತ್ರ­ದಲ್ಲಿ ಪಕ್ಷದ ಗೆಲುವಿನ ದೃಷ್ಟಿಯಿಂದ ವಸ್ತುಸ್ಥಿತಿ ಅರಿತು ಟಿಕೆಟ್‌ ಘೋಷಿಸ­ಬೇಕು ಎಂದು ಒತ್ತಾಯಿಸಿದ್ದಾರೆ.

ಯಾವುದೇ ಕಾರಣಕ್ಕೂ ಧರ್ಮಸಿಂಗ್ ಅವರಿಗೆ ಟಿಕೆಟ್‌ ನೀಡಬಾರದು. ಆಕಾಂಕ್ಷಿಗಳಾಗಿರುವ ಸ್ಥಳೀಯರೇ ಆದ, ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಬಸವರಾಜ ಬುಳ್ಳಾ ಅಥವಾ ಬುಳ್ಳಾ ಅವರಿಗಿಂತಲೂ ಉತ್ತಮರಾದ ಯಾರಾದರೂ ಇದ್ದಲ್ಲಿ ಗುರುತಿಸಿ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂದು ಕೋರಿದ್ದಾರೆ.

ಸಂಸದರಾಗಿ ಧರ್ಮಸಿಂಗ್‌ ಅವರ ನಿರ್ಲಕ್ಷ್ಯದಿಂದಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್‌್ ಮತಗಳು ಕಡಿಮೆಯಾಗಿವೆ.

ಬೀದರ್‌ ಲೋಕಸಭೆ ಕ್ಷೇತ್ರದ  ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾಗಿ ಕಡಿಮೆ ಮತಗಳನ್ನು ಕಾಂಗ್ರೆಸ್‌ ಪಡೆ­ದಿದೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ, ಕೇಂದ್ರದ ವಿವಿಧ ಸ್ಥಾನ­ಗಳಿಗೆ ವಿರೋಧಪಕ್ಷಗಳ ಬೆಂಬಲಿಗರಿಗೆ ನಾಮನಿರ್ದೇಶನ ಮಾಡಿರುವ  ಕ್ರಮಗಳ ಹಿನ್ನೆಲೆಯಲ್ಲಿಯೂ ಅವರ ವಿರುದ್ಧ ಅಸಮಾಧಾನವಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.