ADVERTISEMENT

ನಗರದ ನಾಲ್ಕು ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 9:07 IST
Last Updated 16 ಜೂನ್ 2017, 9:07 IST
ಬೀದರ್‌ನ ಜಿಲ್ಲಾಸ್ಪತ್ರೆ ಕಟ್ಟಡ
ಬೀದರ್‌ನ ಜಿಲ್ಲಾಸ್ಪತ್ರೆ ಕಟ್ಟಡ   

ಬೀದರ್: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಲಾಸ್ಟೇಡಿಯಂ ಟೆಟಾನಿ ಬ್ಯಾಕ್ಟೀರಿಯಾ ಪತ್ತೆಯಾದ ಕಾರಣ ಮೂರು ಶಸ್ತ್ರಚಿಕಿತ್ಸಾ ಘಟಕಗಳನ್ನು ಸ್ಥಗಿತಗೊಳಿಸಿದ್ದು, ರೋಗಿಗಳ ಶಸ್ತ್ರಚಿಕಿತ್ಸೆಗೆ ನಗರದ ನಾಲ್ಕು ಆಸ್ಪತ್ರೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಸಾಮಾನ್ಯ ಹೆರಿಗೆ ಆಗದವರಿಗೆ ‘ತಾಯಿ ಭಾಗ್ಯ’ ಯೋಜನೆ ಅಡಿ ಒಡಂಬಡಿಕೆ ಮಾಡಿಕೊಂಡಿರುವ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ, ವಿಶ್ವಾಸ್ ಮೆಮೊರಿಯಲ್ ಆಸ್ಪತ್ರೆ ಹಾಗೂ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ನಗರದ ಹಳೆಯ ಸರ್ಕಾರಿ ಆಸ್ಪತ್ರೆಯನ್ನೂ ಶಸ್ತ್ರಚಿಕಿತ್ಸೆಗೆ ಅಣಿಗೊಳಿಸಲಾಗುತ್ತಿದೆ.

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಐದು ಆಂಬುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದ್ದು, ತುರ್ತು ಅವಶ್ಯಕತೆ ಇರುವ ರೋಗಿಗಳನ್ನು ಈ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತಿದೆ.
‘ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ಘಟಕಗಳಲ್ಲಿ ಕ್ಲಾಸ್ಟೇಡಿಯಂ ಟೆಟಾನಿ ಬ್ಯಾಕ್ಟಿರಿಯಾ ಪತ್ತೆಯಾಗಿದ್ದು, ಇಲ್ಲಿ ಶಸ್ತ್ರಚಿಕಿತ್ಸೆ ಮುಂದುವರಿಸಿದರೆ ರೋಗಿಗಳ ಸಾವು ಸಂಭವಿಸುವ ಸಾಧ್ಯತೆ ಇದೆ.

ADVERTISEMENT

ಹೀಗಾಗಿ ಮಂಗಳವಾರ ಮೂರೂ ಶಸ್ತ್ರಚಿಕಿತ್ಸಾ ಘಟಕಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಎಸ್.ರಗಟೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬ್ಯಾಕ್ಟಿರಿಯಾ ಕಂಡು ಬಂದ ನಂತರ ನಿತ್ಯ ರಾಸಾಯನಿಕ ಬಳಸಿ ಮೂರೂ ಘಟಕಗಳನ್ನು ಸ್ವಚ್ಛಗೊಳಿಸಿ ಫ್ಯೂಮಿಗೇಶನ್ ಮಾಡಲಾಗುತ್ತಿದೆ. ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಬ್ಯಾಕ್ಟಿರಿಯಾ ಕಳುಹಿಸಲಾಗಿದೆ.

ಸೋಮವಾರ (ಜೂ.19) ಪರೀಕ್ಷಾ ವರದಿ ಬರಲಿದ್ದು. ಅಲ್ಲಿಯವರೆಗೆ ಶಸ್ತ್ರಚಿಕಿತ್ಸಾ ಘಟಕಗಳು ಬಂದ್ ಇರಲಿವೆ. ಪರೀಕ್ಷಾ ವರದಿ ನೆಗೆಟಿವ್ ಬಂದರೆ ಮತ್ತೆ ಘಟಕಗಳನ್ನು ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲಾಸ್ಪತ್ರೆಯಲ್ಲಿ ನಿತ್ಯ ಸುಮಾರು 15ರಿಂದ 20 ಹೆರಿಗೆ ಆಗುತ್ತವೆ. ಇದರಲ್ಲಿ 8ರಿಂದ 10 ಸಿಸೇರಿಯನ್ ಆಗುತ್ತವೆ. ಸಾಮಾನ್ಯ ಹೆರಿಗೆಗೆ ಸಮಸ್ಯೆ ಇಲ್ಲ ಎಂದು ಹೇಳಿದರು. ಹಳೆ ಸರ್ಕಾರಿ ಆಸ್ಪತ್ರೆಯಲ್ಲಿ 10ರಿಂದ 20 ಶಸ್ತ್ರಚಿಕಿತ್ಸೆ ಮಾಡಲು ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಅವರು ತಿಳಿಸಿದರು.

1987ರಲ್ಲಿ 8 ರೋಗಿಗಳ ಸಾವು
ನಗರದ ಜಿಲ್ಲಾಸ್ಪತ್ರೆಯ ಮೂರು ಶಸ್ತ್ರಚಿಕಿತ್ಸಾ ಘಟಕಗಳಲ್ಲಿ ಬ್ಯಾಕ್ಟಿರಿಯಾ ಪತ್ತೆಯಾಗಿರುವುದು ರೋಗಿಗಳಲ್ಲಿ ಆತಂಕ ಮೂಡಿಸಿದ್ದು, 1987ರಲ್ಲಿ ಸಂಭವಿಸಿದ್ದ ಘಟನೆ ನೆನಪಿಸಿಕೊಳ್ಳುವಂತೆ ಮಾಡಿದೆ.

1987ರಲ್ಲಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ಘಟಕಗಳನ್ನು ಪರೀಕ್ಷೆ ಮಾಡದೆ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಟೆಟಾನಸ್‌ನಿಂದ 8 ರೋಗಿಗಳು ಮೃತಪಟ್ಟಿದ್ದರು ಎಂದು ಎಚ್‌.ಸೋಮನಾಥ ಹೇಳಿದರು.

* * 

ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಾ ಘಟಕದಲ್ಲಿ  ಬ್ಯಾಕ್ಟಿರಿಯಾ ಪತ್ತೆಯಾಗಿರುವುದರಿಂದ ಬಂದ್ ಮಾಡಲಾಗಿದೆ. ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಡಾ.ಸಿ.ಎಸ್.ರಗಟೆ
ಜಿಲ್ಲಾ ಶಸ್ತ್ರಚಿಕಿತ್ಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.