ಭಾಲ್ಕಿ: ಈ ಭಾಗದ ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಶತಾಯುಶಿ ಲಿಂ.ಡಾ. ಚನ್ನಬಸವ ಪಟ್ಟದ್ದೇವರ 12ನೇ ಸ್ಮರಣೋತ್ಸವ ಹಾಗೂ ಕಲ್ಯಾಣ ನಾಡಿನ 24ನೇ ಶರಣ ಸಮ್ಮೇಳನ ಏ.20ರಿಂದ 22ರವರೆಗೆ ಭಾಲ್ಕಿಯ ಚನ್ನಬಸವ ಆಶ್ರಮದಲ್ಲಿ ವೈಭವಪೂರ್ಣವಾಗಿ ನಡೆಯಲಿದೆ.ಗದಗ ಡಂಬಳದ ತೋಂಟದಾರ್ಯ ಜಗದ್ಗುರು ಡಾ.ಸಿದ್ಧಲಿಂಗ ಮಹಾಸ್ವಾಮೀಜಿಯವರ ದಿವ್ಯ ಸನ್ನಿಧಾನ ಹಾಗೂ ಡಾ. ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಅದ್ದೂರಿ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಪ್ರಕಾಶ ಖಂಡ್ರೆ ತಿಳಿಸಿದ್ದಾರೆ.
ಏ.20ರಂದು ಬೆಳಿಗ್ಗೆ 9.30ಕ್ಕೆ ವಚನ ಸಾಹಿತ್ಯದ ಭವ್ಯ ಮೆರವಣಿಗೆಯು ಹಿರೇಮಠದಿಂದ ಹೊರಡುವದು. ಇದರ ಜೊತೆಗೆ ಶರಣ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯೂ ನೆರವೇರುತ್ತದೆ. ಜಾನಪದ ಕಲಾತಂಡಗಳು, ಭಜನಾ ತಂಡಗಳು, ಕಂಸಾಳೆ, ಡೊಳ್ಳು ಕುಣಿತ ಮುಂತಾದ ಕಲಾಸಿರಿಯ ತಂಡಗಳು ಪಾಲ್ಗೊಳ್ಳಲಿವೆ.ಮಧ್ಯಾಹ್ನ 1 ಗಂಟೆಗೆ ಷಟಸ್ಥಲ ಧ್ವಜಾರೋಹಣ, ಸಾಯಂಕಾಲ 5ಕ್ಕೆ ಲೋಕಸಭಾ ಅಧ್ಯಕ್ಷೆ ಮೀರಾಕುಮಾರ ಅವರಿಂದ ಉದ್ಘಾಟನಾ ಸಮಾರಂಭ ಜರುಗುವದು. ಇಳಕಲ್‌ನ ಮಹಾಂತ ಸ್ವಾಮೀಜಿ ಅಧ್ಯಕ್ಷತೆ, ಜಿಲ್ಲಾ ಉಸ್ತುವಾರಿ ಸಚಿವ ರೇವೂನಾಯಕ್ ಬೆಳಮಗಿ, ಲೋಕಸಭಾ ಸದಸ್ಯ ಧರ್ಮಸಿಂಗ್, ಸುರೇಶ ಶಟಕಾರ ನಾರಾಯಣಖೇಡ, ಶಾಸಕ ಈಶ್ವರ ಖಂಡ್ರೆ, ರಹೀಮ್‌ಖಾನ್, ಡಾ. ಅಮರನಾಥ ಸೋಲಪೂರೆ, ಲಿಂಗಣ್ಣ ಸತ್ಯಂಪೇಟೆ, ಗುರುನಾಥ ಕೊಳ್ಳೂರ್ ಮುಂತಾದವರು ಉಪಸ್ಥಿತಿ ಇರುವರು.
ಏ.21ರಂದು ಅಕ್ಕ ಅನ್ನಪೂರ್ಣಾ ಅವರ ನೇತೃತ್ವದಲ್ಲಿ ಅಧುನಿಕ ವಚನಕಾರರ ಗೋಷ್ಠಿ-1 ಬಂಡೆಪ್ಪ ಖೂಬಾ ಉದ್ಘಾಟಿಸುವರು. ಡಾ. ಗಂಗಮ್ಮ ಸತ್ಯಂಪೇಟೆ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3ಗಂಟೆಗೆ “ಯುವ ಜನತೆ ಮತ್ತು ಬಸವಣ್ಣ” ಕುರಿತು 2ನೇ ಗೋಷ್ಠಿ ಗುರುಮಹಾಂತ ಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ. ಗುಲ್ಬರ್ಗಾ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಸಂಜಯ ಮಾಕಾಲ ಉದ್ಘಾಟಿಸುವರು. ಸುರೇಶ ಚನ್ನಶಟ್ಟಿ ಅಧ್ಯಕ್ಷತೆ ವಹಿಸುವರು.
ಸಂಜೆ 5ಗಂಟೆಗೆ “ಮಠಾಧೀಶರು ಮತ್ತು ಬಸವತತ್ವ” ಕುರಿತು 3ನೇ ಗೋಷ್ಠಿ ನಡೆಯುವದು. ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ಉಸ್ತುರಿಶ್ರೀಗಳು, ಸಿದ್ಧರಾಮ ಶರಣರು ಬೆಲ್ದಾಳ, ಬೆಳಗಾವಿಯ ನಿಜಗುಣಾನಂದ ಸ್ವಾಮೀಜಿ, ಶಿವಶರಣಪ್ಪ ಕಲ್ಬುರ್ಗಿ ಮುಂತಾದವರು ಇರುವರು. ಏ.22ರಂದು ಬೆಳಿಗ್ಗೆ 9:30ಗಂಟೆಗೆ “ಅಸಮಾನತೆ ನೆಲೆಗಳು ಮತ್ತು ಬಸವಣ್ಣ” ಕುರಿತು 4ನೇ ಗೋಷ್ಠಿ ಕಿತ್ತೂರಿನ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವದು. ಪ್ರೊ. ಬಿ.ಆರ್. ಚಂದ್ರಶೇಖರ ಉದ್ಘಾಟಿಸುವರು. ಮಾಜಿ ಸಚಿವ ವೈಜಿನಾಥ ಪಾಟೀಲ ಅಧ್ಯಕ್ಷತೆ ವಹಿಸುವರು. ಡಾ. ದೇ. ಜವರೇಗೌಡ. ರಾಜ್ಯಸಭಾ ಸದಸ್ಯ ಕೆ. ಬಿ. ಶಾಣಪ್ಪ ಮುಂತಾದವರು ಉಪಸ್ಥಿತರಿರುವರು.
ಮಧ್ಯಾಹ್ನ 12ಕ್ಕೆ “ಸಾಮೂಹಿಕ ವಿವಾಹ ಹಾಗೂ ಅಂತರ್ಜಾತಿ ಮದುವೆಯಾದವರಿಗೆ ಸತ್ಕಾರ ಸಮಾರಂಭ ಜರುಗುವದು. ಸಂಜೆ 4ಕ್ಕೆ ಸಮಾರೋಪ ಸಮಾರಂಭ ಜರುಗುವದು. ನವದೆಹಲಿಯ ಸ್ವಾಮಿ ಅಗ್ನಿವೇಶ್ ಉದ್ಘಾಟಿಸುವರು. ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಕೆ.ಎಸ್ ಭಗವಾನ್, ಪ್ರಕಾಶ ಖಂಡ್ರೆ, ವಿಲಾಸಮತಿ ಖೂಬಾ, ಡಾ.ವಿಕ್ರಮ ವಿಸಾಜಿ, ಸಚಿವ ವಿ. ಸೋಮಣ್ಣ, ಗೋವಿಂದ ಕಾರಜೋಳ, ಶಾಸಕರಾದ ಬಸವರಾಜ ಪಾಟೀಲ ಹುಮನಾಬಾದ, ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ, ಶಾಸಕ ಬಸವರಾಜ ಪಾಟೀಲ ಅಟ್ಟೂರ, ರಾಜಶೇಖರ ಪಾಟೀಲ, ಬಂಡೆಪ್ಪ ಕಾಶೆಂಪೂರ, ಪ್ರಭು ಚವಾಣ್, ಕಾಜಿ ಅರ್ಷದ್ ಅಲಿ ಮುಂತಾದವರು ಇರುವರು. ಪ್ರತಿದಿನ ಸಂಜೆ 8.30ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಾಂಸ್ಕೃತಿಕ ಉತ್ಸವ, ರೂಪ, ನಾಟಕಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.