ADVERTISEMENT

ಬದುಕು ಕಟ್ಟಿಕೊಟ್ಟ ‘ಪ್ರಚಾರ’ ಕಾಯಕ

ನಾಗೇಶ್‌ ಪ್ರಭಾ
Published 3 ಡಿಸೆಂಬರ್ 2013, 10:46 IST
Last Updated 3 ಡಿಸೆಂಬರ್ 2013, 10:46 IST
ಜನವಾಡದ ಅಲಿಬಾಗ್ ನಿವಾಸಿ  ಚಂದ್ರಶೇಖರ್‌ ಘಂಟಿ ಮತ್ತು ಅವರ ಪ್ರಚಾರದ ವೈಖರಿ
ಜನವಾಡದ ಅಲಿಬಾಗ್ ನಿವಾಸಿ ಚಂದ್ರಶೇಖರ್‌ ಘಂಟಿ ಮತ್ತು ಅವರ ಪ್ರಚಾರದ ವೈಖರಿ   

ಜನವಾಡ: ಅಂಗವೈಕಲ್ಯದ ಬಗೆಗೆ ಅಸಹಾಯಕತೆಯ ಮಾತುಗಳನ್ನಾಡುವವರೇ ಹೆಚ್ಚು. ಅಂತಹದ್ದರಲ್ಲಿ ಇಲ್ಲೊಬ್ಬರು ತಮ್ಮ ಮಾತುಗಳನ್ನು ‘ಪ್ರಚಾರ’ಕ್ಕೆ ಬಳಸಿಕೊಂಡು ಬದುಕು ಕಟ್ಟಿಕೊಂಡ ಕಥೆ ಇದು.

ನಗರದ ಅಲಿಬಾಗ್ ನಿವಾಸಿ ಚಂದ್ರಶೇಖರ್ ಘಂಟಿ ಹುಟ್ಟಿನಿಂದಲೇ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡವರು. ಆದರೂ, ಕೈಕಟ್ಟಿ ಕೂರದೆ ಧ್ವನಿವರ್ಧಕದಲ್ಲಿ ಸರ್ಕಾರಿ ಯೋಜನೆ, ಖಾಸಗಿ ಕಾರ್ಯಕ್ರಮಗಳ ಬಗೆಗೆ ‘ಪ್ರಚಾರ’ ನಡೆಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

‘ದಶಕಗಳ ಹಿಂದೆ ವಿವಿಧ ಕಾರ್ಯಕ್ರಮಗಳ ಪ್ರಚಾರಕ್ಕೆ ಧ್ವನಿವರ್ಧಕ ಹಾಗೂ ಡಂಗೂರಗಳೇ ಸಾಧನವಾಗಿದ್ದವು. ಧ್ವನಿವರ್ಧಕ ಪರಿಣಾಮಕಾರಿ ಮಾಧ್ಯಮವಾಗಿತ್ತು. ಪಿಯುಸಿವರೆಗೆ ಶಿಕ್ಷಣ ಪೂರೈಸಿದ ನಾನು 1965 ರಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಚಾರ ಕಾರ್ಯಕ್ಕೆ ಧುಮುಕಿದೆ. ಆ ಪ್ರಚಾರ ನನಗೆ ಉದ್ಯೋಗದ ಜೊತೆಗೆ ಹೆಸರನ್ನು ತಂದುಕೊಟ್ಟಿತು’ ಎಂದು ಹೇಳುತ್ತಾರೆ 62 ವರ್ಷದ ಚಂದ್ರಶೇಖರ್ ಘಂಟಿ.

ಸರ್ಕಾರದ ವಿವಿಧ ಯೋಜನೆ, ಶಿಬಿರ, ರಾಜಕೀಯ ಪಕ್ಷಗಳ ಸಭೆ- ಸಮಾರಂಭ, ಸಮಾವೇಶ ಮತ್ತಿತರ ಕಾರ್ಯಕ್ರಮಗಳ ಬಗೆಗೆ ಧ್ವನಿವರ್ಧಕ ಅಳವಡಿಸಿದ ಆಟೊದಲ್ಲಿ ನಗರದೆಲ್ಲೆಡೆ ಪ್ರಚಾರ ನಡೆಸುತ್ತೇನೆ. ಕಾರ್ಯಕ್ರಮವೊಂದರ ಪ್ರಚಾರಕ್ಕೆ ₨ 300 ಸಿಗುತ್ತದೆ. ತಿಂಗಳಲ್ಲಿ ಕನಿಷ್ಠ ಹತ್ತು ಕಾರ್ಯಕ್ರಮಗಳ ಗುತ್ತಿಗೆ ದೊರೆಯುತ್ತದೆ. ಆಧುನಿಕ ದಿನಗಳಲ್ಲಿಯೂ ಧ್ವನಿರ್ವಕಗಳ ಪ್ರಚಾರ ಬೇಡಿಕೆ ಕಡಿಮೆಯಾಗಿಲ್ಲ.
 
ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ತಿಂಗಳಿಗೆ ₨ 800 ರೂ. ಬಾಡಿಗೆ ಇದೆ. ಮಾಸಿಕ ₨3 ಸಾವಿರ ರೂಪಾಯಿ ಆದಾಯದಲ್ಲಿ ಎಲ್ಲ ಅಗತ್ಯಗಳನ್ನು ಪೂರೈಸಿಕೊಳ್ಳುತ್ತೇನೆ’ ಎಂದು ಹೇಳುತ್ತಾರೆ.

ತ್ರಿಚಕ್ರ ಸೈಕಲ್ ಕೂಡ ದುರಸ್ತಿಗೆ ಬಂದಿದೆ. ಮೂರು ವರ್ಷಗಳಿಂದ ಅಂಗವಿಕಲ ಮಾಸಾಶನವೂ ಸ್ಥಗಿತವಾಗಿದೆ. ಅಂಗವೈಕಲ್ಯ ಶಾಪವಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ. ಯಾರಿಗೂ ಕೈಯೊಡ್ಡದೆ ಕಾಯಕದ ಮೂಲಕ ಸ್ವಾವಲಂಬಿ ಬದುಕು ಸಾಗಿಸಿ ಎಂದು ಅಂಗವಿಕಲರಿಗೆ ಸಲಹೆ ನೀಡುತ್ತಾರೆ. ಇಳಿ ವಯಸ್ಸಿನಲ್ಲೂ ಕಾಯಕದ ಮೂಲಕ ಬದುಕು ಸವೆಸುತ್ತಿರುವ ಘಂಟಿ ಅವರ ಸೇವೆಗೆ ಸಾರ್ವಜನಿಕವಾಗಿಯೂ ಮೆಚ್ಚುಗೆ ವ್ಯಕ್ತವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.