ADVERTISEMENT

ಬಸವಕಲ್ಯಾಣ ರಸ್ತೆ ದುಸ್ಥಿತಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 9:57 IST
Last Updated 3 ಜೂನ್ 2013, 9:57 IST

ಬಸವಕಲ್ಯಾಣ: ಇಲ್ಲಿನ ಸಸ್ತಾಪುರ ಬಂಗ್ಲಾಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ತಗ್ಗುಗಳು ಬಿದ್ದು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿ, ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಒಬ್ಬರಿಗೆ ಗಾಯವಾಗಿದ್ದರಿಂದ ರೊಚ್ಚಿಗೆದ್ದ ನಾಗರಿಕರು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಅಟೋನಗರ ಮಸೀದಿ ಹತ್ತಿರದ ಯು ಟರ್ನ್ ಹಾಗೂ 9ನೇ ರಾಷ್ಟ್ರೀಯ ಹೆದ್ದಾರಿಯಿಂದ ನಗರಕ್ಕೆ ಆಗಮಿಸುವ ರಸ್ತೆಯಲ್ಲಿ ಪ್ರವೇಶದ್ವಾರದ ಬಳಿ ಅಲ್ಲಲ್ಲಿ ತಗ್ಗುಗಳು ಬಿದ್ದಿವೆ. ಭಾರೀ ವಾಹನಗಳಿಗೆ ಅಷ್ಟೇ ಅಲ್ಲ; ಬೈಕ್‌ಗಳನ್ನು ತೆಗೆದುಕೊಂಡು ಹೋಗಬೇಕಾದರೂ ತೊಂದರೆ ಆಗುತ್ತಿದೆ.

ವಾಹನ ವೇಗವಾಗಿ ಚಲಾಯಿಸಿದರೆ ಇಂಥ ತಗ್ಗುಗಳಲ್ಲಿ ವಾಹನ ತಿರುವು ಮುರುವು ಆಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಒಳಗೆ ಕುಳಿತ ಪ್ರಯಾಣಿಕರಿಗೆ ತೊಂದರೆಯಾಗುವುದಲ್ಲದೆ, ವಾಹನಗಳ ಡಿಕ್ಕಿ ಸಂಭವಿಸುತ್ತಿದೆ. ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.

ಮುಖ್ಯರಸ್ತೆಯಲ್ಲಿನ ತಗ್ಗುಗಳನ್ನು ಮುಚ್ಚಬೇಕು. ಅಲ್ಲಲ್ಲಿ ಸ್ಪೀಡ್ ಬ್ರೇಕರ್ ಹಾಕಿಸಬೇಕು. ರಸ್ತೆ ದ್ವಿಭಾಜಕದ ಎತ್ತರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸಂಬಂಧಿತರಿಗೆ ಈ ಮೊದಲು ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎಂದು ದೂರಿದರು. ಶಿರಸ್ತೆದಾರ ದೇವಿದಾಸ ಬಿರಾದಾರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ರಸ್ತೆತಡೆ ಮಾಡಿದ್ದರಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಪ್ರಯಾಣಿಕರು, ಮದುವೆ ಕಾರ್ಯಕ್ರಮಗಳಿಗೆ ಹೋಗುವವರು ಪರದಾಡಬೇಕಾಯಿತು. ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಉಮೇಶ ಕಾಂಬಳೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದರು.
ಅಟೋನಗರ ಕಾರ್ಮಿಕರ ಸಂಘದ ಅಧ್ಯಕ್ಷ ಖಲೀಲ ಅಹ್ಮದ್, ಇಕ್ಬಾದುಲ್ಲಾ ಖಾನ್, ಅನೀಲ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.