ADVERTISEMENT

ಬಿಡಪ್ ಸಾಮಾಜಿಕ ಕಳಕಳಿ ಸ್ಮರಣೀಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 5:45 IST
Last Updated 2 ಜನವರಿ 2012, 5:45 IST

ಬೀದರ್: ಆರ್.ಬಿ. ಬಿಡಪ್ ಅವರ ಸಾಮಾಜಿಕ ಕಳಕಳಿ ಸ್ಮರಣೀಯವಾಗಿದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ ನುಡಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ಭಾನುವಾರ ನಡೆದ ಆರ್.ಬಿ. ಬಿಡಪ್ ಅವರ ಪುಣ್ಯಸ್ಮರಣೆ ಹಾಗೂ ಆರ್.ವಿ. ಬಿಡಪ್ ಶಿಷ್ಯವೇತನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೇರು ವ್ಯಕ್ತಿತ್ವದ ಬಿಡಪ್ ಅವರು ಯಾರಿಗೂ ಶರಣಾಗುತ್ತಿರಲಿಲ್ಲ. ಅವರ ನಿರ್ಧಾರಗಳು ಅಚಲವಾಗುತ್ತಿದ್ದವು. ಆತ್ಮಸ್ಥೈರ್ಯ ಮತ್ತು ಧೈರ್ಯವೇ ಅವರ ಸಾಧನೆಯ ಶಕ್ತಿ ಆಗಿದ್ದವು ಎಂದು ಬಣ್ಣಿಸಿದರು.

ಆರ್.ಬಿ. ಬಿಡಪ್ ದೂರದೃಷ್ಟಿಯ ನಾಯಕರಾಗಿದ್ದರು ಎಂದು ಬಿಡಪ್ ಅವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದ ಪ್ರೊ. ಬಿ.ಆರ್. ಕೊಂಡಾ ಹೇಳಿದರು.

ಬಿಡಪ್ ರಾಷ್ಟ್ರೀಯ ಮನೋಭಾವ ಹೊಂದಿದ್ದದರು. ನೇತಾಜಿ ಸುಭಾಷಚಂದ್ರ ಅವರಂಥ ನಾಯಕರನ್ನು ಕಂಡಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿಯು ಪಾಲ್ಗೊಂಡಿದ್ದರು ಎಂದು ಹೇಳಿದರು. ಬೀದರ್‌ನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಾಧನೆ ಮಾಡಿರುವವರೆಲ್ಲ ಶ್ರಮದಿಂದಲೇ ಮೇಲಕ್ಕೆ ಬಂದವರು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಸದಾನಂದ ಎನ್. ನಾಯಕ್ ಹೇಳಿದರು.

ವಿದ್ಯಾರ್ಥಿಗಳು ಗುರಿ ಮುಟ್ಟುವವರೆಗೆ ಪ್ರಯತ್ನಶೀಲರಾಗಿರಬೇಕು ಎಂದು ಸಲಹೆ ಮಾಡಿದರು.
ಪ್ರೊ. ಎಸ್.ಎಸ್. ದೇವರಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐವರು ವಿದ್ಯಾರ್ಥಿಗಳಿಗೆ ಆರ್.ವಿ. ಬಿಡಪ್ ಶಿಷ್ಯವೇತನ ವಿತರಿಸಲಾಯಿತು. ವೈದ್ಯ ವಿದ್ಯಾರ್ಥಿ ರಾಮಲಿಂಗ ಗೋಪಿನಾಥ (ರೂ. 10 ಸಾವಿರ), ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಕಾವೇರಿ ಸುರೇಶ ಕರಂಜಿ, ಯೋಗೇಶ ಸೂರ್ಯವಂಶಿ (ತಲಾ ರೂ. 5 ಸಾವಿರ), ಪಿಯುಸಿ ವಿದ್ಯಾರ್ಥಿಗಳಾದ ಶಾಲಿನಿ ಶ್ರೀನಿವಾಸ ಮತ್ತು ಕೀರ್ತಿ ಬಾಬುರಾವ (ತಲಾ ರೂ. 2 ಸಾವಿರ) ಶಿಷ್ಯವೇತನ ಪಡೆದವರಲ್ಲಿ ಸೇರಿದ್ದಾರೆ.

ಪ್ರಮುಖರಾದ ಬಾಬುರಾವ ಪಾಟೀಲ್ ಸಿರಗಾಪುರ, ಹರಿಶ್ಚಚಂದ್ರ ಗೋಯಲ್, ಬಸವಂತರಾವ ಶೆಟಕಾರ, ಪ್ರೊ. ಎಸ್.ಬಿ. ಬಿರಾದಾರ್, ವೀರಶೆಟ್ಟಿ ಗಂಗಶೆಟ್ಟಿ, ಮಲ್ಲಿಕಾರ್ಜುನ ಪ್ರಭಾ, ಪ್ರೊ. ಗಣೇಶನ್, ಪ್ರೊ. ರಾಜೇಂದ್ರ ಬೀರಾದಾರ್, ಪ್ರೊ. ಶಾಮಕಾಂತ ಕುಲಕರ್ಣಿ, ಪ್ರೊ. ಜೂಜಾ ಉಪಸ್ಥಿತರಿದ್ದರು.

ಪ್ರಾಚಾರ್ಯ ಪ್ರೊ. ವಿ. ಧನಪಾಲ್ ಸ್ವಾಗತಿಸಿದರು. ಡಾ. ಜಗನ್ನಾಥ ಹೆಬ್ಬಾಳೆ ನಿರೂಪಿಸಿದರು. ಪ್ರೊ. ಎಂ.ಎಸ್. ಪಾಟೀಲ್ ವಂದಿಸಿದರು.

5ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾದ ಆರ್.ವಿ. ಬಿಡಪ್ ಅವರ ಪುತ್ಥಳಿಗೆ ಜಿಲ್ಲಾ ಸತ್ರ ನ್ಯಾಯಾಧಿಶ ಸದಾನಂದ ಎನ್. ನಾಯಕ್ ಮಾಲಾರ್ಪಣೆ ಮಾಡಿ ಗೌರವಿಸಿದರು. ಕೆಆರ್‌ಇ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.