ADVERTISEMENT

ಬೀದರ್ ತಾಲ್ಲೂಕು ಪಂಚಾಯಿತಿ :ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 8:50 IST
Last Updated 20 ಅಕ್ಟೋಬರ್ 2012, 8:50 IST

ಬೀದರ್: ಬೀದರ್ ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್‌ನ ಮರಕುಂದಾ ಕ್ಷೇತ್ರದ ಸದಸ್ಯ ಸುಭಾಷ್ ಬಸವಣಪ್ಪ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಅಮಲಾಪುರ ಕ್ಷೇತ್ರದ ಸದಸ್ಯೆ ಶಿವಮಂಗಲಾ ಮಲ್ಕಾಪುರ ಆಯ್ಕೆಯಾಗಿದ್ದಾರೆ.

ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕಾಗಿ ಸುಭಾಷ್ ಬಸವಣಪ್ಪ ಮತ್ತು ಬಿಜೆಪಿಯ ಅಲಿಯಾಬಾದ್ (ಜೆ) ಕ್ಷೇತ್ರದ ಸದಸ್ಯ ಅಶೋಕ್ ಸಿದ್ರಾಮಪ್ಪ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಶಿವಮಂಗಲಾ ಮಲ್ಕಾಪುರ ಹಾಗೂ ಬಿಜೆಪಿಯ ಗಣಪತಿ ವಾಸುರಾಮ ನಾಮಪತ್ರ ಸಲ್ಲಿಸಿದರು.

ಅಂತಿಮವಾಗಿ ಸುಭಾಷ್ ಬಸವಣ್ಣಪ್ಪ ಅಧ್ಯಕ್ಷ ಮತ್ತು ಶಿವಮಂಗಲಾ ಮಲ್ಕಾಪುರ ಉಪಾಧ್ಯಕ್ಷರಾಗಿ ಆಯ್ಕೆ ಯಾದರು. ಇದರೊಂದಿಗೆ ತಾಲ್ಲೂಕು ಪಂಚಾಯಿತಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ.

ನೂತನ ಅಧ್ಯಕ್ಷ ಸುಭಾಷ್ ಬಸವಣಪ್ಪ 12 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಅಶೋಕ್ ಸಿದ್ರಾಮಪ್ಪರಿಗೆ 9 ಮತಗಳು ಸಿಕ್ಕಿದವು. ಉಪಾಧ್ಯಕ್ಷೆ ಶಿವಮಂಗಲಾ ಮಲ್ಕಾಪುರ 13 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಗಣಪತಿ ವಾಸುರಾಮ್‌ಗೆ 9 ಮತಗಳು ಲಭಿಸಿದವು. ಚಿಲ್ಲರ್ಗಿ ಕ್ಷೇತ್ರದ ಜೆಡಿಎಸ್ ಸದಸ್ಯೆ ನೀಲಮ್ಮ ಮಾಣಿಕ್ ಗೈರು ಹಾಜರಾಗಿದ್ದರು.

ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಚುನಾವಣಾಧಿಕಾರಿಯಾಗಿದ್ದ ಬೀದರ್ ಉಪ ವಿಭಾಗಾಧಿಕಾರಿ ಪದ್ಮಾ, ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಅಧಿಕೃತವಾಗಿ ಪ್ರಕಟಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ವಿಶ್ವನಾಥ ಫುಲೇಕರ್ ಇದ್ದರು.

23 ಸದಸ್ಯ ಬಲದ ತಾಲ್ಲೂಕು ಪಂಚಾಯಿತಿಯಲ್ಲಿ ಜೆಡಿಎಸ್ 9, ಬಿಜೆಪಿ 7, ಕಾಂಗ್ರೆಸ್ 4 ಮತ್ತು ಮೂವರು ಪಕ್ಷೇತರ ಸದಸ್ಯರಿದ್ದಾರೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಬೆಂಬಲಿಗರು ಹೂಮಾಲೆ ಹಾಕಿ, ಸಿಹಿ ತಿನ್ನಿಸಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.