ADVERTISEMENT

ವಿಜ್ಞಾನ ಶಿಕ್ಷಕನಿಗೆ ಒಲಿದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 5:46 IST
Last Updated 5 ಸೆಪ್ಟೆಂಬರ್ 2013, 5:46 IST

ಚಿಟಗುಪ್ಪಾ: 32 ವರ್ಷಗಳಿಂದ ನಿಷ್ಠೆ ಯಿಂದ ಶಿಕ್ಷಕ ವೃತ್ತಿ ನಿರ್ವಹಿಸುತ್ತಿರುವ ಪಟ್ಟಣದ ಗೌರಿಬಾಯಿ ಅಗರವಾಲ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಮಹಾರುದ್ರಪ್ಪ ಆಣದೂರೆ ಅವರಿಗೆ ಈ ಬಾರಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಲಭಿಸಿದೆ. ನವದೆಹಲಿಯಲ್ಲಿ  ಸೆ.5ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ವಿದ್ಯಾರ್ಥಿ ವೃಂದಕ್ಕೆ ಪ್ರೀತಿಯ ಗುರುವಾಗಿ, ಶಿಕ್ಷಕ ಮಿತ್ರರಿಗೆ ಸಂಘಟನಾ ಚತುರರಾಗಿ ಪ್ರತಿವರ್ಷ 20ಕ್ಕೂ ಹೆಚ್ಚು ವೈಜ್ಞಾನಿಕ, ಸಾಮಾಜಿಕ, ಸಾಹಿತ್ಯದ ಚಟುವಟಿಕೆಗಳ ಮೂಲಕ ಮಹಾರುದ್ರಪ್ಪ ಕ್ರಿಯಾಶೀಲರಾಗಿದ್ದಾರೆ. ವಲಯಮಟ್ಟದಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿದ್ದಾರೆ.

16 ವಲಯ ಕನ್ನಡ ಸಾಹಿತ್ಯ ಸಮ್ಮೇಳನಗಳು, ಪವಾಡ ರಹಸ್ಯ ಬಯಲು, ವಿಜ್ಞಾನ ವಸ್ತುಪ್ರದರ್ಶನ, ಭಾರತ ಜ್ಞಾನ ವಿಜ್ಞಾನ ತಾಲ್ಲೂಕು ಸಮಿತಿ ಅಧ್ಯಕ್ಷರಾಗಿ ಸಾಕ್ಷರತಾ ಕಾರ್ಯಕ್ರಮಗಳು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ವಲಯದ ಹಲವು ಶಾಲಾ ಕಾಲೇಜುಗಳಿಗೆ ಖುದ್ದಾಗಿ ಭೇಟಿ ನೀಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಮೂಲಕ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿದ್ದಾರೆ.

ಶಿಕ್ಷಕರಾಗಿ ನಿರಂತರವಾಗಿ ವೈಜ್ಞಾನಿಕ, ಸಾಹಿತ್ಯಿಕ, ಶೈಕ್ಷಣಿಕ ಚಟುವಟಿಕೆಗಳು ಜವಾಬ್ದಾರಿ ಹಾಗೂ ದಕ್ಷತೆಯಿಂದ ನಡೆಸಿದ ಫಲವಾಗಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಅರಸಿ ಬಂದಿದೆ. 2010- 11ನೇ ಸಾಲಿನಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಇವರು, ವೃತ್ತಿಯಲ್ಲಿ ಶಿಕ್ಷಕನಾಗಿ ಪ್ರವೃತ್ತಿಯಲ್ಲಿ ಸಮಾಜ ಸೇವಕನಂತೆ ದುಡಿಯುತ್ತಿದ್ದಾರೆ.

ಮಂಗಳವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ಗೆ ಗುಲ್ಬರ್ಗ ವಿಭಾಗದ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆ ಸಹ ಆಗಿದ್ದಾರೆ. ಇದ ರೊಂದಿಗೆ `ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ'ಗೆ ಲಭಿಸಿದ್ದು ಸಂಭ್ರಮ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.