ADVERTISEMENT

‘ಶೌಚಾಲಯ ಸ್ವಾಭಿಮಾನದ ಸಂಕೇತ

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 6:14 IST
Last Updated 3 ಅಕ್ಟೋಬರ್ 2017, 6:14 IST

ಭಾಲ್ಕಿ:‘ಪ್ರತಿಯೊಬ್ಬರು ಮನೆಗೊಂದು ಶೌಚಾಲಯ ಹೊಂದುವುದು ಸ್ವಾಭಿಮಾನ ಮತ್ತು ಗೌರವದ ಸಂಕೇತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ತಾಲ್ಲೂಕಿನ ಅಟ್ಟರ್ಗಾ ಗ್ರಾಮದಲ್ಲಿ ಸೋಮವಾರ ನಡೆದ ನಮ್ಮ ನಡಿಗೆ ಸ್ವಚ್ಛ ಗ್ರಾಮದ ಕಡೆಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೀದರ್‌ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಶೌಚಾಲಯ ನಿರ್ಮಾಣದ ಅಭಿಯಾನವು ಆಂದೋಲನದ ಸ್ವರೂಪ ಪಡೆಯಬೇಕು’ ಎಂದು ಹೇಳಿದರು.

ADVERTISEMENT

‘ಅಟ್ಟರ್ಗಾ ಗ್ರಾಮ ಸ್ವಾತಂತ್ರ್ಯ ಸೇನಾನಿಗಳ ಗ್ರಾಮ. ಸ್ವಾತಂತ್ರೋತ್ಸವ ಚಳುವಳಿಯಲ್ಲಿ ಈ ಊರಿನ ಕೊಡುಗೆ ಹಿರಿದು. ಗ್ರಾಮದ ಪ್ರತಿ ಕುಟುಂಬ ಶೌಚಾಲಯ ಕಟ್ಟಿಸಿಕೊಂಡು ಸ್ವಚ್ಛತೆಗೆ ಒತ್ತು ನೀಡಿದ್ದು,ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಎಂದು ಹೆಸರು ಪಡೆಯು ತ್ತಿರುವುದು ಶ್ಲಾಘನೀಯ’ ಎಂದರು.

‘ನಿರ್ಮಲ ಭಾರತ ನಿರ್ಮಲ ಬೀದರ್‌ ಅಭಿಯಾನ ಜಿಲ್ಲೆಯಾದ್ಯಂತ ಯಶಸ್ವಿಯಾಗಲು ಅಧಿಕಾರಿ ವರ್ಗದ ವರೊಂದಿಗೆ ಜನತೆ ಕೈಜೋಡಿಸಬೇಕು. ಗ್ರಾಮಗಳ ಅಭಿವೃದ್ಧಿಯಾಗದ ಹೊರತು ದೇಶ ಅಭಿವೃದ್ಧಿಯಾಗುವುದಿಲ್ಲ ಎಂಬುದನ್ನರಿತು ರಾಜ್ಯ ಸರ್ಕಾರ ಗ್ರಾಮಾಭಿವೃದ್ಧಿ, ಮಹಿಳಾ ಸಬಲೀ ಕರಣಕ್ಕೆ ಒತ್ತು ನೀಡಿದೆ’ ಎಂದರು.

‘ಅನ್ನಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ, ಮನಸ್ವಿನಿ, ಮೈತ್ರಿ ಹೀಗೆ ಅನೇಕ ವಿನೂತನ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆ ಗಳಿಂದ ಸಮಾಜದ ಎಲ್ಲ ವರ್ಗದ ಜನರಿಗೆ ಅನುಕೂಲವಾಗಿದೆ. ಭಾಲ್ಕಿ ತಾಲ್ಲೂಕಿನ ಪ್ರಗತಿಗೆ ಕೋಟ್ಯಂತರ ರೂ. ಅನುದಾನ ನೀಡಲಾಗಿದೆ’ ಎಂದರು.

‘ಹೈ.ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ ನೂತನವಾಗಿ ಹೊಸ ಪಿಯು ಕಾಲೇಜ್‌ ಹಾಗೂ ಪ್ರೌಢ ಶಾಲೆಗಳು ಮಂಜೂರಾಗಿದ್ದು, ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ. ಜಿಲ್ಲೆಯ ಎಲ್ಲೆಡೆ ರಸ್ತೆ ಸುಧಾರಣೆಗೆ ಒತ್ತು ನೀಡಲಾಗಿದೆ’ ಎಂದು ಹೇಳಿದರು.

ಜಿ.ಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಪ್ರಕಾಶ ಪಾಟೀಲ, ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷೆ ರೇಖಾ ಪಾಟೀಲ, ಉಪಾಧ್ಯಕ್ಷ ಮಾರುತಿರಾವ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗೂಬಾಯಿ ದಿಗಂಬರ್,ಉಪಾಧ್ಯಕ್ಷೆ ಪ್ರಭಾವತಿ, ಜಿ.ಪಂ ಸದಸ್ಯ ವಿದ್ಯಾಸಾಗರ ಶಿಂಧೆ, ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸೆಲ್ವಮಣಿ ಆರ್., ಸ್ವಚ್ಛ ಭಾರತ ಅಭಿಯಾನದ ನೊಡಲ್ ಅಧಿಕಾರಿ ಗೌತಮ್‌ ಅರಳಿ, ಪಿಡಿಒ ಬಲಭೀಮ ಪವಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.