ಸಿಂಧನೂರು: ದೊಂಬರಾಟವನ್ನೇ ಜೀವನೋಪಾಯ ಮಾಡಿಕೊಂಡಿರುವ ನೂರಾರು ಕುಟುಂಬಗಳು ನಗರದ ಮಹೆಬೂಬಿಯಾ ಕಾಲೊನಿಯಲ್ಲಿರುವ ಇಖ್ರಾ ಶಾಲೆಯ ಹತ್ತಿರ ಹಾಗೂ ಸುಕಾಲಪೇಟೆಯ ಖಾಲಿ ಜಾಗೆಗಳಲ್ಲಿ ಸಣ್ಣಪುಟ್ಟ ತಟ್ಟಿ ಶೆಡ್‌ಗಳನ್ನು ಹಾಕಿಕೊಂಡು ಬಿಸಿಲು, ಮಳೆಯೆನ್ನದೆ ವಾಸಿಸುತ್ತಿವೆ. ಆದರೆ ಈ ಕುಟುಂಬಗಳಿಗೆ ಸಣ್ಣದೊಂದು ಸೂರು ಇ್ಲ್ಲಲಿಯವರೆಗೆ ದೊರೆತಿಲ್ಲ.
ಖಾಲಿ ಜಾಗೆಯ ಮಗ್ಗಲು ಚರಂಡಿಯ ದುರ್ವಾಸನೆ, ಹಂದಿಗಳ ಉಪಟಳ, ಸುತ್ತಲೂ ಜಾಲಿ ಪೊದೆ, ಉಳ ಉಪ್ಪಟೆಗಳ ಕಾಟ ಹೀಗೆ ಎಲ್ಲವನ್ನು ಸಹಿಸಿಕೊಂಡು ಇಲ್ಲಿನ ಕುಟುಂಬಗಳು ಸುಮಾರು 40ವರ್ಷಗಳಿಂದ ಮಕ್ಕಳು-ಮೊಮ್ಮಕ್ಕಳನ್ನು ಜೋಪಾನ ಮಾಡಿಕೊಂಡು ಬಂದಿದ್ದಾರೆ. ಜೋರು ಮಳೆ ಬಂದರೆ ಸಣ್ಣ ತಟ್ಟಿ ಶೆಡ್‌ನೊಳಗೆ ನೀರು ನುಗ್ಗಿ ಇಡೀ ದಿನ ಜಾಗರಣೆ ಮಾಡಬೇಕಾಗುತ್ತದೆ. ಬೇಸಿಗೆ ದಿನಗಳಲ್ಲಿ ಜಾಲಿ ಮರಗಳೇ ಇವರಿಗೆ ನೆರಳ ಆಸರೆ ನೀಡುತ್ತವೆ. ದೇವಿಯ ಆರಾಧಕರಾದ ದೊಂಬರ ಕುಟುಂಬಗಳು ನಗರದಲ್ಲಿ ನಡೆಯುವ ಸಂತೆ, ಜಾತ್ರೆ ಸೇರಿದಂತೆ ಇನ್ನಿತರ ಹಬ್ಬ ಹರಿದಿನಗಳಲ್ಲಿ ಮೈಮೇಲೆ ಚಾಟಿ ಬೀಸಿಕೊಂಡು ರಕ್ತ ಬಸಿದು ಸಾರ್ವಜನಿಕರಿಂದ ಕಾಣಿಕೆಯಾಗುವ ಸಿಗುವ ಅಷ್ಟೋ ಇಷ್ಟು ದುಡ್ಡಿನಿಂದ ಹೊಟ್ಟೆಗೆ ಹಿಟ್ಟು ಕಾಣುತ್ತವೆ. ಇನ್ನುಳಿದಂತೆ ಬೇರಾವ ಕೆಲಸಗಳು ಇವರಿಗೆ ಗೊತ್ತಿಲ್ಲ.
`ನಾವ್ ಮೊದಲು ಮಂಜುನಾಥ ಸಿನಿಮಾ ಟಾಕೀಜ್ ಐತಲ್ರಿ ಅಲ್ಲಿ ಇದ್ವಿ. ಬರು ಬರುತ ಇಲ್ಲೆಗ್ಯ ಬಂದೀವಿ. ಯಾರ‌್ನೋಡಿದ್ರು ನಮ್ಮ ಜಾಗೇದಾಗ ಇರಬ್ಯಾಡ್ರಿ ಅಂತರಾ. ಸುಮಾರು ಐವತ್ತು ವರ್ಷ ಆತು ಇಲ್ಲಿವರೆಗ್ಯ ಒಂದು ಮನಿ ಕಾಣಾಕ ಆಗಿಲ್ಲ. ಮಳಿ ಬಂತಂದ್ರ ನಮ್ಮ ಕಥಿ ಕೇಳಬಾರ‌್ದು. ಈಗ ಸುಡು ಸುಡು ಬಿಸಿಲಿಗ್ಯ ತಟ್ಟಿ ಶೆಡ್‌ನ್ಯಾಗ ಕುಂದ್ರಾದು ಆಗವಲ್ತು. ಜಾಲಿಗಿಡಾನ ಆಸರಾಗೈತಿ~ ಎಂದು ದೊಂಬರ ಕುಟುಂಬದ ಯಜಮಾನರೊಬ್ಬರು `ಪ್ರಜಾವಾಣಿ~ಯ ಮುಂದೆ ತನ್ನ ಅಳಲು ತೋಡಿಕೊಂಡ.
ಈ ಕುಟುಂಬಗಳಿಗೆ ಸರ್ಕಾರದ ಗುರುತಿನ ಚೀಟಿಯಾಗಲಿ, ಪಡಿತರ ಕಾರ್ಡ್ ಆಗಲಿ ಇಲ್ಲ. ಸುಮಾರು 40 ವರ್ಷಗಳಿಂದ ನಗರದಲ್ಲಿಯೇ ವಾಸಿಸುತ್ತಿರುವ ಇವರಿಗೆ ಸರ್ಕಾರದಿಂದ ಯಾವುದೇ ಯೋಜನೆಯ ಸೌಲಭ್ಯ ದೊರೆಯದಿರುವುದು ವಿಪರ್ಯಾಸ. ಸರ್ಕಾರದ ಆಶ್ರಯ ಮನೆ ಯೋಜನೆ, ಗುರುತಿನ ಚೀಟಿ ಹಾಗೂ ಪಡಿತರ ಕಾರ್ಡ್ ಇನ್ನಿತರ ಸೌಲಭ್ಯಗಳನ್ನು ಕೊಡಿಸುವಂತೆ ಹಲವು ಬಾರಿ ನಗರಸಭೆ ಮತ್ತು ತಾಲ್ಲೂಕಾಡಳಿತಕ್ಕೆ ಮನವಿಪತ್ರ ಸಲ್ಲಿಸಿದರೂ ಇಲ್ಲಿಯವರೆಗೆ ಯಾವುದೇ ಅನುಕೂಲ ಆಗಿಲ್ಲ ಎಂದು ಈ ಕುಟುಂಬಗಳು ಅಸಮಾಧಾನ ವ್ಯಕ್ತಪಡಿಸುತ್ತವೆ.
ಹಲವು ವರ್ಷಗಳಿಂದ ವಾಸಿಸುತ್ತಾ ಬಂದಿದ್ದರೂ ಅಲೆಮಾರಿಗಳು ಎಂಬ ಕಾರಣಕ್ಕೆ ತಮ್ಮ ಬಗ್ಗೆ ಯಾವುದೇ ಚುನಾಯಿತ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮುತುವರ್ಜಿಸವಹಿಸುತ್ತಿಲ್ಲ. ಸ್ವಂತ ಜಾಗೆ, ಸೂರು ಹೊಂದಿರದ ಈ ಕುಟುಂಬಗಳಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಕೊಡ ನೀರನ್ನು ಅವರಿವರಿಂದ ಬೈಸಿಕೊಳ್ಳುತ್ತಾ ಮನೆ ಮನೆ ತಿರುಗಿ ತರಬೇಕಾಗಿದೆ ಎಂದು ಮಹಿಳೆಯರು ನೊಂದು ನುಡಿಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.