ADVERTISEMENT

ಸೋಯಾ 14 ಸಾವಿರ ಕ್ವಿಂಟಲ್ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 9:56 IST
Last Updated 3 ಜೂನ್ 2013, 9:56 IST

ಔರಾದ್: ಪ್ರಸಕ್ತ ಮುಂಗಾರು ಹಂಗಾಮಿಗಾಗಿ 14 ಸಾವಿರ ಕ್ವಿಂಟಲ್ ಸೋಯಾ ಬೀಜಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ ತಿಳಿಸಿದ್ದಾರೆ.

ಆರು ಹೋಬಳಿ ಕೇಂದ್ರ ಮತ್ತು ಒಂಬತ್ತು ಹೆಚ್ಚುವರಿ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈಗಾಗಲೇ 7 ಸಾವಿರ ಕ್ವಿಂಟಲ್ ಸೋಯಾ, 48 ಕ್ವಿಂಟಲ್ ಉದ್ದು, 15 ಕ್ವಿಂಟಲ್ ಹೆಸರು, 60 ಕ್ವಿಂಟಲ್ ತೊಗರಿ ಮತ್ತು 210 ಕ್ವಿಂಟಲ್ ಹೈಬ್ರಿಡ್ ಜೋಳದ ದಾಸ್ತಾನು ಮಾಡಿಕೊಳ್ಳಲಾಗಿದೆ.

ಎಲ್ಲ 37 ಪಿಕೆಪಿಎಸ್‌ಗಳಲ್ಲಿ ಡಿಎಪಿ ಮತ್ತು ಇತರೆ ಗೊಬ್ಬರ ಲಭ್ಯ ಇದ್ದು, ರೈತರು ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಈ ವಾರದಲ್ಲಿ ಬಿತ್ತನೆ ಬೀಜ ವಿತರಿಸಲು ಶುರು ಮಾಡಲಾಗುವುದು ಎಂದು ಹೇಳಿದ್ದಾರೆ.

ಆಂದೋಲನ: ಈಚೆಗೆ ತಾಲ್ಲೂಕಿನ ಚಿಕ್ಲಿ (ಯು) ಗ್ರಾಮದಲ್ಲಿ ಬೀಜೋಪಚಾರ ಆಂದೋಲನ ನಡೆಯಿತು. ಬೀಜೋಪಚಾರದಿಂದ ಅಧಿಕ ಇಳುವರಿ ಜೊತೆಗೆ ಸಸಿಗಳಲ್ಲಿ ರೋಗ ನಿರೋಧಕ ಮತ್ತು ಕೀಟ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ ಎಂದು ಸೋಮಶೇಖರ ಬಿರಾದಾರ ಹೇಳಿದರು.

ಒಂದು ಕೆ.ಜಿ. ಬೀಜಕ್ಕೆ 4.5 ಗ್ರಾಂ. ಟ್ರೈಕೊಡರ್ಮಾ, 50 ಗ್ರಾಂ. ರಂಜಕ ಕರಗಿಸುವ ಗೊಬ್ಬರ ಮತ್ತು ರೈಜೊಬಿಯಂ ಬಳಸಿ ಬೀಜೋಪಚಾರ ಮಾಡಬೇಕು ಎಂದು ಸಲಹೆ ನೀಡಿದರು. ಬೀಜೋಪಚಾರದ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ಜಿಂಕ್, ಬೋರ‌್ಯಾಕ್ಸ್, ಜಿಪ್ಸ್‌ಂ ಬಳಸುವುದರಿಂದ ಭೂಮಿಯ ಫಲವತತೆ ಹೆಚ್ಚುತ್ತದೆ ಎಂದು ತಿಳಿಸಿದರು.

ಆತ್ಮ ಯೋಜನೆ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಪಾಂಡುರಂಗ ಪಾಟೀಲ ಸ್ವಾಗತಿಸಿದರು. ರೈತ ಮುಖಂಡ ಧೊಂಡಿಬಾ ಚವ್ಹಾಣ್, ದಿಲೀಪ ಪಾಟೀಲ, ಶ್ರೀಮಂತರಾವ, ಬಾಪುರಾವ, ಬಾಳಸಾಬ್ ಇತರೆ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.