ADVERTISEMENT

ಸ್ವೀಪ್‌ ನಿರ್ಲಕ್ಷ್ಯ: ಅಧಿಕಾರಿಗಳ ತರಾಟೆ, ನೋಟಿಸ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 8:05 IST
Last Updated 20 ಮಾರ್ಚ್ 2014, 8:05 IST

ಬೀದರ್‌: ಮತದಾರರ ಜಾಗೃತಿ ಕುರಿತು ಚುನಾವಣಾ ಆಯೋಗದ ಸೂಚನೆ­ಯಂತೆ ಜಿಲ್ಲೆಯಲ್ಲಿ ಚಾಲ್ತಿಯಲ್ಲಿ ಇರುವ ಮತದಾರರ ವ್ಯವಸ್ಥಿತ ಜಾಗೃತಿ ಕಾರ್ಯಕ್ರಮ (ಸ್ವೀಪ್‌)ವನ್ನು ಸಮರ್ಪಕ ರೀತಿಯಲ್ಲಿ ಆಯೋಜಿಸದ ಲೋಪಕ್ಕಾಗಿ ಗುರುನಾನಕ್‌ ದೇವ್ ಎಂಜಿನಿಯರಿಂಗ್ ಕಾಲೇಜಿಗೆ ನೋಟಿಸ್‌ ನೀಡಲಾಗಿದೆ.

ಜಿಲ್ಲಾಡಳಿತದ ಸೂಚನೆಯಂತೆ ಕಾಲೇಜು ಆಡಳಿತ ಕಾರ್ಯಕ್ರಮ ಆಯೋಜಿಸ­ಬೇಕಿತ್ತು. ಆದರೆ ಯಾವುದೇ ವ್ಯವಸ್ಥೆ ಮಾಡದೇ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ನೋಟಿಸ್ ನೀಡಲಾಗಿದೆ. ಉತ್ತರ ಆಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್‌ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಕಳೆದ ಎರಡು –ಮೂರು ದಿನಗಳಿಂದ ಯುವ ಮತದಾರರಲ್ಲಿ ಜಾಗೃತಿ ಮೂಡಿಸಲು ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಕಡೆ ಸ್ವೀಪ್‌ ಕಾರ್ಯ­ಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಬುಧವಾರ ಗುರುನಾನಕ್‌ ದೇವ್ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಾರ್ಯ­­ಕ್ರಮವನ್ನು ಆಯೋಜಿಸ­ಲಾಗಿತ್ತು. ಜಿಲ್ಲಾ ಸ್ವೀಪ್‌ ಕಾರ್ಯ­ಕ್ರಮದ ವೀಕ್ಷಕ ರಾಜೀವ್ ಕೆ ಜೈನ್, ಜಿಲ್ಲಾಧಿಕಾರಿ ಡಾ. ಜಾಫರ್, ನೀತಿ ಸಂಹಿತೆಯ ಜಾರಿ ಹೊಣೆ ಹೊತ್ತಿರುವ ಜಿಲ್ಲಾ ಪಂಚಾಯಿತಿ ಸಿಇಒ ಉಜ್ವಲ್‌ ಕುಮಾರ್‌ ಘೋಷ್‌ ಮಧ್ಯಾಹ್ನ ಭೇಟಿ ನೀಡಿದಾಗ ಯಾವುದೇ ಸಿದ್ಧತೆ ಆಗಿರಲಿಲ್ಲ.

ಕಟ್ಟಡ ಸುತ್ತಿಸಿದರು: ಕಾಲೇಜು ಆವರಣಕ್ಕೆ ಬಂದ ಜಿಲ್ಲಾಧಿಕಾರಿ ಮತ್ತು ಸ್ವೀಪ್‌ ವೀಕ್ಷಕ ಮತ್ತು ಇತರ ಅಧಿಕಾರಿ­ಗಳನ್ನು ಕಾಲೇಜಿನ ಪ್ರಾಂಶುಪಾಲ ಮತ್ತು ಅಧಿಕಾರಿ ಬಾಬು ದಾನಿ ಅವರು ಕಾಲೇಜಿನ ನಾಲ್ಕು ಅಂತಸ್ತಿನ ಕಟ್ಟಡದ ವಿವಿಧ ಮಹಡಿವರೆಗೂ ಸುತ್ತಿಸಿದರು. ಆದರೆ ಕಾರ್ಯಕ್ರಮ ಆಯೋಜಿಸಿದ್ದ ಸುಳಿವು ಕಾಣಲಿಲ್ಲ.

ಅಂತಿಮವಾಗಿ ವಿದ್ಯಾರ್ಥಿಗಳಿಗೆ ತರಗತಿ ನಡೆಯುತ್ತಿದ್ದ ಕೊಠಡಿ­ಯೊಂದರ ಬಳಿ ನಿಲ್ಲಿಸಿ ಇಲ್ಲಿಯೇ ಮತದಾರರ ಜಾಗೃತಿಯ ಸ್ವೀಪ್‌ ಕಾರ್ಯಕ್ರಮ ಮಾಡಿ ಎಂದು ಕಾಲೇಜಿನ ಅಧಿಕಾರಿಗಳು ತಿಳಿಸಿದರು.

ಜಿಲ್ಲಾಧಿಕಾರಿ ಸ್ಥಳದಲ್ಲಿಯೇ ಪ್ರಾಂಶುಪಾಲರು ಮತ್ತು ಬಾಬುದಾನಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಇದು, ಚುನಾವಣಾ ಸಂಬಂಧಿತ ಕಾರ್ಯಕ್ರಮ. ಹೊಣೆಗಾರಿಕೆ ಇರ­ಬೇಕು’ ಎಂದ ಅವರು, ಈ ಲೋಪಕ್ಕಾಗಿ ನೋಟಿಸ್‌ ಜಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಹುಮನಾಬಾದ್‌ ವರದಿ: ಲೋಕಸಭಾ ಚುನಾವಣೆ ಮತದಾನ ಜಾಗೃತಿ ಕುರಿತು ತಾಲ್ಲೂಕಿನ ದುಬಲಗುಂಡಿ ಕ್ಲಸ್ಟರ್‌ ಮಟ್ಟದ ಜನಜಾಗೃತಿ ಜಾಥಾ ಬುಧವಾರ ನಡೆಯಿತು.

ಗ್ರಾಮದ ಮುಖ್ಯ ಬೀದಿಗಳ ಮೂಲಕ ಜಾಥಾ ನಡೆಸಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸ­ಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಹಣಮಂತಪ್ಪ, ಶಿಕ್ಷಕರಾದ ಬಿಸ್ಮಿಲ್ಲಾ, ಶ್ರೀದೇವಿ, ಈರಮ್ಮ, ಗೋರಖನಾಥ. ಅಶೋಕ­ಕುಮಾರ, ರಿಜ್ವಾನ್‌, ವಿಜಯಲಕ್ಷ್ಮಿ, ಸುವರ್ಣ, ಶಾಂತಾ­ಬಾಯಿ, ರಾಜಕುಮಾರ ಹರಕಂಚಿ ಇದ್ದರು.

ಚಿಟಗುಪ್ಪಾ ವರದಿ: ಮತದಾರರು ಜಾಗೃತರಾಗಿ ಮತಚಲಾಯಿಸಿದಲ್ಲಿ ಸುಭದ್ರ ರಾಷ್ಟ್ರ  ನಿರ್ಮಾಣ ಆಗುತ್ತದೆ ಎಂದು ಹುಮನಾಬಾದ್ ತಾಲ್ಲೂಕು ಶಿಕ್ಷಕರ ಸಂಘದ ನಿರ್ದೇಶಕ ಸಂಜುರೆಡ್ಡಿ ಜಂಪಾ ತಿಳಿಸಿದರು.

ಬುಧವಾರ ಪಟ್ಟಣದಲ್ಲಿ  ನಡೆದ ಮತದಾನದ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು. ಮತ­ದಾರರು ಚುನಾವಣೆಯಲ್ಲಿ ಆಮಿಶ­ಗಳಿಗೆ ಒಳಗಾಗದೆ ತಮಗೆ ಸೂಕ್ತ ಎನಿಸಿದ ಅಭ್ಯರ್ಥಿಗಳಿಗೆ ನೇರವಾಗಿ ಮತಗಟ್ಟೆಗೆ ಹೋಗಿ ಮತಚಲಾಯಿಸ­ಬೇಕು. ಯಾವುದೇ ಪಕ್ಷದ ಕಾರ್ಯಕರ್ತರು ನೀಡುವ ವಾಹನಗಳು ಬಳಸಿಕೊಳ್ಳದೆ ಸ್ವತಂತ್ರರಾಗಿ ಮತಗಟ್ಟೆಗೆ ಹೋಗಬೇಕು ಎಂದರು. ರಮೇಶ್ ಸಲಗರ್, ಬಶೀರ ಅಹ್ಮದ್‌ ನೇತೃತ್ವ ವಹಿಸಿದ್ದರು. ಹಲವು ಶಾಲೆಯ ಮಕ್ಕಳು ಜಾಥಾದಲ್ಲಿ  ಇದ್ದರು. ಗಾಂಧಿ ಚೌಕ್, ನೆಹರು ಚೌಕ್, ಶಿವಾಜಿಚೌಕ್ ಮಾರ್ಗ­ದಿಂದ ಜಾಥಾ ನಡೆಸಲಾಯಿತು.

ಧರ್ಮಸಿಂಗ್ ನಾಮಪತ್ರ ಇಂದು: ಜಿಲ್ಲೆಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ
ಬೀದರ್: ಬೀದರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಮಾ.20ರಂದು ಮಧ್ಯಾಹ್ನ 12.40 ಗಂಟೆಗೆ ನಗರದಲ್ಲಿ ನಾಮಪತ್ರ ಸಲ್ಲಿಸುವರು.

ಬಳಿಕ ನಗರದ ಗಣೇಶ್ ಮೈದಾನದಲ್ಲಿ ಕಾರ್ಯಕರ್ತರ, ಬೆಂಬಲಿಗರ ಸಭೆಯು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಭಾಗವಹಿಸಲಿದ್ದಾರೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾಜಿ ಅರ್ಷದ್‌ ಅಲಿ, ‘ಈ ಸಭೆಯೊಂದಿಗೆ ಲೋಕಸಭೆ ಚುನಾವಣೆಗೆ ಕ್ಷೇತ್ರದಲ್ಲಿ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಲಾಗುವುದು. ಇದರಿಂದ ಮುಖ್ಯಮಂತ್ರಿ ರಾಜ್ಯದಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದಂತೆ ಆಗಲಿದೆ’ ಎಂದರು.

ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯ ವೈಜನಾಥ ಪಾಟೀಲ ಸೇರಿದಂತೆ ಅನ್ಯ ಪಕ್ಷಗಳ ಕೆಲ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ ಆಗಲಿದ್ದಾರೆ.  ಈ ಮುಖಂಡರ ಸೇರ್ಪಡೆ ಪಕ್ಷಕ್ಕೆ ನೆರವಾಗಲಿದೆ ಎಂದರು.

ಕ್ಷೇತ್ರದಲ್ಲಿಯೂ ಈ ಬಾರಿಯೂ ಕಾಂಗ್ರೆಸ್‌ಗೆ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಹೊಸ ರೈಲುಗಳ ಆರಂಭ, ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನ ಮಾನ ನೀಡುವ 371(ಜೆ) ಕಲಂ ತಿದ್ದುಪಡಿ ಮತ್ತಿತರ ಅಂಶಗಳು ಪಕ್ಷಕ್ಕೆ ವರದಾನವಾಗಲಿವೆ ಎಂದರು.

ಜಿಲ್ಲಾ ಮುಖಂಡರಾದ ರಾಜಶೇಖರ ಪಾಟೀಲ ಅಷ್ಟೂರು, ಅರವಿಂದ ಕುಮಾರ ಅರಳಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಬೀದರ್‌ ಕ್ಷೇತ್ರ: ಒಂದು ನಾಮಪತ್ರ ಸಲ್ಲಿಕೆ

ಬೀದರ್: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬುಧವಾರ ಆರಂಭವಾಗಿದ್ದು, ಮೊದಲ ದಿನ ಒಂದು ನಾಮಪತ್ರ ಸಲ್ಲಿಕೆಯಾಗಿದೆ.
ಭಾಲ್ಕಿ ತಾಲ್ಲೂಕಿನ ಕಪಲಾಪುರ ಗ್ರಾಮದ ಬಾಬು ಪಾಶಾ ಮೊಯಿನುದ್ದೀನ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಮತದಾನ ಜಾಗೃತಿ ಇಂದು : ನಗರದ ಲಿಂಗರಾಜಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ (ಮಾ. 20) ಮತದಾನ ಜಾಗೃತಿ ಶಿಬಿರ ಮತ್ತು ಮತದಾನ ಮಾಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿಕೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.