ADVERTISEMENT

ಹಳ್ಳಿಖೇಡ(ಬಿ): ಸೀಮಿನಾಗನಾಥ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 6:43 IST
Last Updated 3 ಡಿಸೆಂಬರ್ 2012, 6:43 IST

ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ(ಬಿ)ದ ಇತಿಹಾಸ ಪ್ರಸಿದ್ಧ ಸೀಮಿನಾಗನಾಥ ದೇವರ ಜಾತ್ರೆಯ ಅಂಗವಾಗಿ ಭಾನುವಾರ ಬೆಳಿಗ್ಗೆ ರಥೋತ್ಸವ ನಡೆಯಿತು.

ಪರಂಪರೆಯಂತೆ ಶನಿವಾರ ಮಧ್ಯ ರಾತ್ರಿ ನಾಗನಾಥ ದೇವರ ಪಲ್ಲಕ್ಕಿ ದೇವಸ್ಥಾನ ಗರ್ಭಗುಡಿಗೆ ಐದು ಪ್ರದಕ್ಷಿಣೆ ಸಲ್ಲಿಸಲಾಯಿತು.
ಉತ್ಸವ ವೇಳೆ ಅಪಾರ ಸಂಖ್ಯೆ ಭಕ್ತರು ನಾಗನಾಥ ದೇವರ ಜಯಘೋಷ ಹೇಳುವುದು ಮತ್ತು ಪಲ್ಲಕ್ಕಿ ಮಾರ್ಗಮಧ್ಯೆ ದೀರ್ಘದಂಡ ಪ್ರಣಾಮ ಹಾಕುತ್ತಿದ್ದಾಗ ಪಲ್ಲಕ್ಕಿ ಅವರ ಮೇಲಿಂದಲೆ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಪ್ರಮುಖ ಆಕರ್ಷಣೆ ಯಾಗಿತ್ತು.

ಭಾನುವಾರ ಬೆಳಿಗ್ಗೆ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಖಾರಿಕ, ಬಾಳೆಹಣ್ಣು, ಕಲ್ಲು ಸಕ್ಕರೆ ಎಸೆಯುವ ಮೂಲಕ ಭಕ್ತಿ ಸೇವೆ ಸಲ್ಲಿಸುತ್ತಿದ್ದರೆ, ರಥವನ್ನು ಹತ್ತಿದ್ದ ನಾಗನಾಥಸ್ವಾಮಿ ಭಕ್ತರು ವಿವಿಧ ಸಿಹಿ ತಿನಿಸು ಪ್ರಸಾದ ರೀತಿಯಲ್ಲಿ ಭಕ್ತರೆಡೆಗೆ ಎಸೆಯುತ್ತಿರುವುದು, ಎಸೆದ ಪ್ರಸಾದ ಹಿಡಿಯುವುದಕ್ಕೆ ಭಕ್ತರು ಪರದಾಡುತ್ತಿದ್ದ ದೃಶ್ಯ ವಿಶೇಷವಾಗಿತ್ತು.

ನೆರೆದ ಭಕ್ತರನ್ನು ನಿಯಂತ್ರಿಸಲು ಸಬ್ ಇನ್‌ಸೆಪಕ್ಟರ್ ಶರಣಬಸವ ಕೂಡ್ಲಾ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ ವ್ಯವಸ್ಥೆ ಮಾಡಲಾಗಿತ್ತು. 

ಜಂಗಿ ಕುಸ್ತಿ: ಭಾನುವಾರ ಮಧ್ಯಾಹ್ನ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಜಂಗಿಕುಸ್ತಿ ಪಂದ್ಯಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತಯ್ಯ ತೀರ್ಥಾ ಚಾಲನೆ ನೀಡಿದರು.

ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ್ದ ಪೈಲ್ವಾನರು ಸಾಹಸ ಪ್ರದರ್ಶಿಸಿದರು. 10ವರ್ಷದ ಚಿಣ್ಣರಿಂದ 50ವರ್ಷ ವರೆಗಿನವರು ಪಂದ್ಯದಲ್ಲಿ ಭಾಗವಹಿಸಿದ್ದರು.

ಉತ್ಸವ ವ್ಯವಸ್ಥಾಪಕ ಮಂಡಳಿ ಪ್ರಮುಖ ಕೇಶವರಾವ ತಳಘಟಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ಬಾಬು ಟೈಗರ್, ನಾಗನಾಥ ಪರಶೆಟ್ಟಿ, ದಿಲರಾಜ್, ಅಡೆಪ್ಪ ಮೋಳಕೇರಿ, ಸುರೇಶಕುಮಾರ, ಶಾಂತಕುಮಾರ ಸೋಂತ, ಸಂದೀಪ ತಳಘಟಕರ್, ಅಶೋಕ ಹಾಲಾ, ತಿಬಶೆಟ್ಟಿ ಪರಿವಾರ ಸದಸ್ಯರು ಸೇವೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.