ADVERTISEMENT

‘ಕ್ರೀಡೆಯಲ್ಲಿ ಪ್ರತಿಭೆ ಹೊರಬರಲಿ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 5:35 IST
Last Updated 17 ಡಿಸೆಂಬರ್ 2013, 5:35 IST

ಬೀದರ್‌: ಪೊಲೀಸ್‌ ಸಿಬ್ಬಂದಿ ನಿರಂತರ ಕೆಲಸದ ಒತ್ತಡದಿಂದ ಬಳಲುವುದು ಸಾಮಾನ್ಯ, ಅವರಿಗೆ ಆರಾಮದಾಯಕ ಅನುಭವವನ್ನು ನೀಡಲು ಕ್ರೀಡಾ­ಕೂಟಗಳು ಸಹಕಾರಿ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್‌ ಹೇಳಿದರು.

ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಸೋಮವಾರ ಆರಂಭ­ವಾದ  ಮೂರು ದಿನಗಳ ಪೊಲೀಸ್‌ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಇಲ್ಲಿ ಸೋಲು ಮತ್ತು ಗೆಲುವು ಮುಖ್ಯವಲ್ಲ. ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವುದು ಮುಖ್ಯ. ಪೊಲೀಸ್‌ ಸಿಬ್ಬಂದಿ ಮೂರು ದಿನದ ಈ ಕ್ರೀಡಾಕೂಟದಲ್ಲಿ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಹೊರ ಹಾಕಬೇಕು ಎಂದರು.

ಬೀದರ್ ನಗರ, ತಾಲ್ಲೂಕಿನಿಂದ ತಲಾ ಒಂದು ತಂಡಗಳು, ಹುಮನಾ­ಬಾದ್‌, ಭಾಲ್ಕಿ, ಬಸವಕಲ್ಯಾಣ ಮತ್ತು ಔರಾದ್‌ನಿಂದ ತಲಾ ಒಂದು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. ಒಟ್ಟಾರೆ 126 ಕ್ರೀಡಾಪಟುಗಳು ಭಾಗವಹಿಸಲಿವೆ. ವಿಜೇತರಿಗೆ ಟ್ರೋಫಿ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್‌ ವಿವರಿಸಿದರು.

ವಿವಿಧ ಆಟೋಟಗಳ ವಿಜೇತರಿಗೆ ತಲಾ 60 ಪ್ರಥಮ ಮತ್ತು ದ್ವಿತೀಯ ಬಹುಮಾನ, 36 ಮಂದಿ ತೃತೀಯ ಬಹುಮಾನ ನೀಡಲಿದ್ದು, ವಿಜೇತರು ಗುಲ್ಬರ್ಗದಲ್ಲಿ ನಡೆಯುವ ವಲಯ ಮಟ್ಟದ ಕ್ರೀಡಾಕೂಟ ಸ್ಪರ್ಧೆಯಲ್ಲಿ ಭಾಗವಹಿಸುವರು ಎಂದರು.

ಕ್ರೀಡಾಕೂಟದ ಸಮಾರೋಪ 18ರಂದು ನಡೆಯಲಿದೆ.

40 ಆಟೋಟಗಳು: ಓಟ, ಉದ್ದ ಜಿಗಿತ, ಎತ್ತರದ ಜಿಗಿತ, ಡಿಸ್ಕಸ್‌ ಥ್ರೋ, ಜಾವೆಲಿನ್‌ ಎಸೆತ, ಷಾಟ್‌ಫುಟ್‌, ವಾಲಿಬಾಲ್, ಕ್ರಿಕೆಟ್‌, ರೈಫೆಲ್‌ ಶೂಟಿಂಗ್, ರಿವಾಲ್ವರ್‌ ಶೂಟಿಂಗ್, ಪಿಸ್ತೂಲ್‌ ಶೂಟಿಂಗ್‌, ಶಟಲ್ ಬ್ಯಾಡ್ಮಿಂಟನ್‌ ಮತ್ತು ಇತರ ಸ್ಪರ್ಧೆಗಳು ನಡೆಯಲಿವೆ.

ಭೂಮಿ ಗುರುತು:  ಪೊಲೀಸ್ ಸಿಬ್ಬಂದಿಗಾಗಿ ತರಬೇತಿ ಶಾಲೆ ಆರಂಭಿಸಲು ಜಿಲ್ಲಾಡಳಿತ ಮನ್ನಳ್ಳಿ ಗ್ರಾಮದ ಬಳಿ ಭೂಮಿಯನ್ನು ಮಂಜೂರು ಮಾಡಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಜ್ವಲ್‌ ಕುಮಾರ್ ಘೋಷ್‌,  ವಲಯ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್‌ ಪನ್ವಾರ್, ತರಬೇತಿ ನಿರತ ಐಎಎಸ್‌ ಅಧಿಕಾರಿ ಪವನ್‌ ಕಲ್ಯಾಣ್‌ ಮತ್ತು ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.