ಬೀದರ್: ರಾಷ್ಟ್ರೀಯ ಜನಪದ ಸಾಹಿತ್ಯ ಸಮ್ಮೇಳನ ಮಾ. 26 ರಿಂದ 28ರವರೆಗೆ ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಪಾಟೀಲ್ ಅಷ್ಟೂರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ವಿವರ ನೀಡಿದರು.
ಮಾ. 26 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ರಂಗಮಂದಿರದಲ್ಲಿ ಜನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಮಧ್ಯಾಹ್ನ 3ಕ್ಕೆ ಜನಪದ ಕಲಾ ತಂಡಗಳ ಪ್ರದರ್ಶನವಿದ್ದು, 24 ಕಲಾ ತಂಡಗಳು ಪ್ರದರ್ಶನ ನೀಡಲಿವೆ ಎಂದು ಹೇಳಿದರು.
ಮಾ.27 ರಂದು ಬೆಳಿಗ್ಗೆ 9 ಗಂಟೆಗೆ ಬೀದರ್ ಜಿಲ್ಲೆಯ ಜನಪದ ಕುರಿತ ಮೊದಲ ಗೋಷ್ಠಿ, ಬೆಳಿಗ್ಗೆ 11.30 ಗಂಟೆಗೆ ಹೈದರಾಬಾದ್ ಕರ್ನಾಟಕ ಭಜನೆ ಹಾಡುಗಳು ಕುರಿತ ಎರಡನೇ ಗೋಷ್ಠಿ, ಮಧ್ಯಾಹ್ನ ಭಾರತದ ಜನಪದ ರಂಗಕಲೆಗಳು ಕುರಿತ ಮೂರನೇ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.
ಮಾ.28 ರಂದು ಬೆಳಿಗ್ಗೆ 9 ಗಂಟೆಗೆ ಜನಪದ ಕಲೆಗಳ ಪರಿಷ್ಕರಣೆ ಅಗತ್ಯತೆ ಕುರಿತ ನಾಲ್ಕನೇ ಗೋಷ್ಠಿ, ಬೆಳಿಗ್ಗೆ 11.30 ಗಂಟೆಗೆ ಕರ್ನಾಟಕ ಜನಪದ ಸಾಹಿತ್ಯ ಸಂಶೋಧನೆ ಕುರಿತ ಐದನೇ ಗೋಷ್ಠಿ ಜರುಗಲಿದೆ. ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಜನಪದ ಕ್ಷೇತ್ರದಲ್ಲಿ ಸಾಧನೆಗೈದ 26 ಜನರಿಗೆ ಜನಪದ ಕಾರಂಜಿ, ಜನಪದ ದೀಪ್ತಿ, ಜನಪದ ಸಂಜೀವಿನಿ ಹಾಗೂ ಜನಪದ ಜ್ಯೋತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಜನಪದ ಸಾಹಿತ್ಯ ಸಮ್ಮೇಳನದ ಸಂಚಾಲಕ ಡಾ. ಜಗನ್ನಾಥ ಹೆಬ್ಬಾಳೆ, ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಹಣಮಂತಪ್ಪ ಪಾಟೀಲ್, ಕರ್ನಾಟಕ ಕಾಲೇಜು ಪ್ರಾಚಾರ್ಯ ಪ್ರೊ. ಆರ್.ಎಂ. ನಂದಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.