ADVERTISEMENT

ಜಿ.ಪಂ ಚುನಾವಣೆ ಸವಾಲಾಗಿ ಸ್ವೀಕರಿಸಿ

ಸಂತಪುರ: ಬಿಜೆಪಿ ತಾಲ್ಲೂಕು ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯಕರ್ತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 6:56 IST
Last Updated 28 ಜುಲೈ 2021, 6:56 IST
ಔರಾದ್ ತಾಲ್ಲೂಕಿನ ಸಂತಪುರನಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಪ್ರಭು ಚವಾಣ್ ಉದ್ಘಾಟಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಇದ್ದರು
ಔರಾದ್ ತಾಲ್ಲೂಕಿನ ಸಂತಪುರನಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಪ್ರಭು ಚವಾಣ್ ಉದ್ಘಾಟಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಇದ್ದರು   

ಔರಾದ್: ‘ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುವಂತೆ’ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಸಲಹೆ ನೀಡಿದರು.

ತಾಲ್ಲೂಕಿನ ಸಂತಪುರನಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ತಾಲ್ಲೂಕು ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕು, ಹೋಬಳಿ, ಮಹಾಶಕ್ತಿ ಕೇಂದ್ರಗಳ ಪದಾಧಿಕಾರಿಗಳು ಸಭೆ ನಡೆಸಿ ಪಕ್ಷದ ಚಟುವಟಿಕೆ ಚರುಕುಗೊಳಿಸಬೇಕು. ಬೂತ್‌ ಮಟ್ಟದ ಕಾರ್ಯಕರ್ತರಿಗೆ ತರಬೇತಿ ನೀಡಿ ಜನರಿಗೆ ಪಕ್ಷ ಹಾಗೂ ಸರ್ಕಾರದ ಯೋಜನೆ ತಿಳಿಹೇಳಬೇಕು’ ಎಂದರು.

ADVERTISEMENT

‘ಬಿಜೆಪಿ ಕಾರ್ಯಕರ್ತರ ಕೇಂದ್ರಿತ ಪಕ್ಷ. ಇಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುತ್ತದೆ. ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸಮಯದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಸಿಗುತ್ತದೆ’ ಎಂದರು.

ಪ್ರಭು ಚವಾಣ್ ಮಾತನಾಡಿ, ‘ನಾನು ಪಕ್ಷದ ಕಾರ್ಯಕರ್ತರ ಶ್ರಮದಿಂದಾಗಿ ಮೂರು ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪಕ್ಷ ನನ್ನನ್ನು ನಿರೀಕ್ಷೆಗೂ ಮೀರಿ ಬೆಳೆಸಿದೆ. ಕಾರ್ಯಕರ್ತರು ನನ್ನ ಜೀವಾಳ. ಹೀಗಾಗಿ ನಾನು ಎಂದಿಗೂ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ’ ಎಂದರು.

ಧುರೀಣ ಈಶ್ವರಸಿಂಗ್ ಠಾಕೂರ್ ಮಾತನಾಡಿ, ‘ಎಲ್ಲ ಕಾರ್ಯಕರ್ತರು, ಮುಖಂಡರು ತಮಗೆ ವಹಿಸಿದ ಕೆಲಸ ನಿಷ್ಠಾಯಿಂದ ಮಾಡಬೇಕು’ ಎಂದರು.

ಬಿಜೆಪಿ ತಾಲ್ಲೂಕು ಉಸ್ತುವಾರಿ ವಿಜಯಕುಮಾರ ಪಾಟೀಲ, ‘ಈ ಬಾರಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರಬೇಕು. ಇದಕ್ಕಾಗಿ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ’ ಎಂದು ತಿಳಿಸಿದರು.

ಜಿ.ಪಂ ಸದಸ್ಯ ಮಾರುತಿ ಚವಾಣ್, ಸುರೇಖಾ ಭೋಸ್ಲೆ, ಧುರೀಣ ಪ್ರಕಾಶ ಟೊಣ್ಣೆ, ಶಿವರಾಜ ಗಂದಗೆ, ಬಂಡೆಪ್ಪ ಕಂಟೆ, ರಾಮಶೆಟ್ಟಿ ಪನ್ನಾಳೆ, ಜಗದೀಶ್ ಖೂಬಾ, ವಸಂತ ವಕೀಲ್, ಶ್ರೀಮಂತ ಪಾಟೀಲ ಹೆಡಗಾಪುರ, ಶ್ರೀನಿವಾಸ ಖೂಬಾ, ಪ್ರಕಾಶ ಜೀರ್ಗಾ, ಶ್ರೀರಂಗ ಪರಿಹಾರ, ಅರಹಂತ ಸಾವಳೆ, ಖಂಡೋಬಾ ಕಂಗಟೆ ಇದ್ದರು.

ಅಧಿಕಾರ ಶಾಶ್ವತವಲ್ಲ: ಪ್ರಭು ಚವಾಣ್

‘ನಾನು ಎರಡು ವರ್ಷ ಕ್ಯಾಬಿನೆಟ್ ಸಚಿವನಾಗಿ ಕೆಲಸ ಮಾಡಿದ ಸಂತೃಪ್ತಿ ಇದೆ. ಹೊಸ ಸಂಪುಟದಲ್ಲಿ ಸ್ಥಾನ ಸಿಕ್ಕರೆ ಸಂತೋಷ. ಸಿಗದೆ ಇದ್ದರೂ ಪರವಾಗಿಲ್ಲ. ಪಕ್ಷಕ್ಕಾಗಿ ದುಡಿಯುತ್ತೇನೆ’ ಎಂದು ಪ್ರಭು ಚವಾಣ್ ಹೇಳಿದರು.

ತಾಲ್ಲೂಕಿನ ಸಂತಪುರದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ, ಅವರು ಮಾತನಾಡಿದರು.

‘ಯಡಿಯೂರಪ್ಪ ಎರಡು ವರ್ಷ ಮುಖ್ಯಮಂತ್ರಿಯಾಗಿ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಕೋವಿಡ್ ಸಂಕಟದ ಸಮಯದಲ್ಲಿ ಜೀವದ ಹಂಗು ತೊರೆದು ಅವರು ಕೆಲಸ ಮಾಡಿದ್ದು, ಇಡೀ ರಾಜ್ಯ ಮೆಚ್ಚುಗೆ ವ್ಯಕ್ತಪಡಿಸಿದೆ. ಈಗ ಹೈಕಮಾಂಡ್‌ ಆದೇಶದಿಂದ ಅವರು ರಾಜೀನಾಮೆ ನೀಡಿದ್ದಾರೆ. ಮುಂದೆಯೂ ಸರ್ಕಾರದಲ್ಲಿ ಅವರ ಸಲಹೆ, ಸಹಕಾರ ಇರಲಿದೆ’ ಎಂದರು.

‘ಔರಾದ್ ತಾಲ್ಲೂಕಿನ ಜನರ ಆಶೀರ್ವಾದದಿಂದ ನಾನು ಮೂರು ಬಾರಿ ಶಾಸಕನಾದೆ. ಮಂತ್ರಿಯೂ ಆದೆ. ಪಶು ಸಂಗೋಪನಾ ಇಲಾಖೆ ಸಚಿವನಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದೆ. ಪಶು ಸಂಪತ್ತು ರಕ್ಷಣೆಗೆ ಸಹಾಯವಾಣಿ ಆರಂಭಿಸಿದ್ದು ದೇಶದಲ್ಲೇ ಮೊದಲು’ ಎಂದು ತಾವು ಸಚಿವರಾಗಿ ಮಾಡಿದ ಕಾರ್ಯದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.