ADVERTISEMENT

ಹೊಸ ಪಿಜಿ ಕೋರ್ಸ್‌ಗೆ ಬ್ರಿಮ್ಸ್‌ ಸಿದ್ಧತೆ

ಗ್ರಂಥಾಲಯ, ಪರೀಕ್ಷಾ ಕೊಠಡಿ ನಿರ್ಮಾಣಕ್ಕೆ ₹ 10.77 ಕೋಟಿ

ಚಂದ್ರಕಾಂತ ಮಸಾನಿ
Published 7 ಅಕ್ಟೋಬರ್ 2021, 13:42 IST
Last Updated 7 ಅಕ್ಟೋಬರ್ 2021, 13:42 IST
ಬ್ರಿಮ್ಸ್‌ ಆಸ್ಪತ್ರೆ
ಬ್ರಿಮ್ಸ್‌ ಆಸ್ಪತ್ರೆ   

ಬೀದರ್‌: ಕಲಬುರಗಿಯ ಜಿಮ್ಸ್‌ನಲ್ಲಿ ಪಿಜಿ ಕೋರ್ಸ್‌ಗೆ ಅನುಮೋದನೆ ದೊರೆತ ಬೆನ್ನಲ್ಲೇ ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎರಡು ಹೊಸ ಪಿಜಿ ಕೋರ್ಸ್‌ ಆರಂಭಿಸಲು ಸಿದ್ಧತೆ ಶುರುವಾಗಿದೆ.

ಬ್ರಿಮ್ಸ್‌ನಲ್ಲಿ ಸ್ತ್ರೀರೋಗ ತಜ್ಞ ಹಾಗೂ ಮಕ್ಕಳ ತಜ್ಞ ವಿಭಾಗದ ಸ್ನಾತಕೋತ್ತರ ಪದವಿ ಆರಂಭಿಸಲು ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ವಿಭಾಗಳಿಗೆ ಅಗತ್ಯವಿರುವ ಸೌಕರ್ಯ ಕಲ್ಪಿಸುವ ಕಾರ್ಯವೂ ಭರದಿಂದ ಸಾಗಿದೆ.

‘ಬ್ರಿಮ್ಸ್‌ನಲ್ಲಿ ಪ್ರಸ್ತುತ ಪಿಜಿ ಕೋರ್ಸ್‌ಗಳು ಇಲ್ಲ. ಆದರೆ, ಎರಡು ಹೊಸ ಪಿಜಿ ಕೋರ್ಸ್‌ಗಳನ್ನು ಆರಂಭಿಸುವ ದಿಸೆಯಲ್ಲಿ ಪ್ರಯತ್ನಗಳು ನಡೆದಿವೆ. ಬ್ರಿಮ್ಸ್‌ನಲ್ಲಿ ಎಲ್ಲ ರೀತಿಯ ತಯಾರಿ ಮಾಡಿಕೊಂಡು ಶೀಘ್ರದಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಬ್ರಿಮ್ಸ್‌ ವೈದ್ಯಕೀಯ ನಿರ್ದೇಶಕ ಡಾ.ಚಂದ್ರಕಾಂತ ಚಿಲ್ಲರ್ಗಿ ತಿಳಿಸಿದರು.

ADVERTISEMENT

ಸಾಮಾನ್ಯವಾಗಿ ಫೆಬ್ರುವರಿ ವೇಳೆಗೆ ವೈದ್ಯಕೀಯ ಕೋರ್ಸ್‌ಗಳ ಪರೀಕ್ಷೆಗಳು ಮುಗಿಯುತ್ತವೆ. ಅದಕ್ಕಿಂತ ಮೊದಲೇ ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕ ಭಾರತೀಯ ವೈದ್ಯಕೀಯ ಪರಿಷತ್‌ಗೆ (ಎಂಸಿಐ) ಪ್ರಸ್ತಾವ ಸಲ್ಲಿಸಿದರೆ 2022ರಲ್ಲಿ ಅನುಮತಿ ದೊರೆತು ತರಗತಿ ಆರಂಭವಾಗುವ ಸಾಧ್ಯತೆ ಇದೆ.

ಕಲಬುರಗಿ ಜಿಮ್ಸ್‌ ಕಳೆದ ವರ್ಷವೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಹೀಗಾಗಿ ಅವರಿಗೆ ಈ ವರ್ಷ ಎಂಸಿಐ ಅನುಮತಿ ನೀಡಿದೆ. ಬ್ರಿಮ್ಸ್‌ಗೆ 2022ರಲ್ಲಿ ಅನುಮತಿ ದೊರೆತರೂ 2022ರಲ್ಲಿ ಪಿ.ಜಿ.ಕೋರ್ಸ್‌ಗಳು ಆರಂಭವಾಗುವುದರಲ್ಲಿ ಸಂದೇಹವಿಲ್ಲ ಎಂದು ಬಿಮ್ಸ್‌ನ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಬ್ರಿಮ್ಸ್‌ನಲ್ಲಿ ಕೇಂದ್ರೀಕೃತ ಗ್ರಂಥಾಲಯ ಹಾಗೂ ಪರೀಕ್ಷಾ ಕೊಠಡಿಗಳ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ₹ 10.77 ಕೋಟಿಗೆ ಅನುಮೋದನೆ ನೀಡಿದೆ.ವೈದ್ಯಕೀಯ ಸೀಟುಗಳ ಮಿತಿಯನ್ನು 100ರಿಂದ 150ಕ್ಕೆ ಹೆಚ್ಚಿಸಲಾಗಿದೆ. ಬ್ರಿಮ್ಸ್‌ನಲ್ಲಿ ಉಪನ್ಯಾಸಕರ ಕೊಠಡಿ, ಆಡಿಟೊರಿಯಂ, ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರ, ಹಾಸ್ಟೆಲ್‌ಗಳ ಉನ್ನತೀಕರಣ, ಎಂಸಿಐ ಮಾನದಂಡಗಳ ಪ್ರಕಾರ ಸಂಸ್ಥೆಯ ಅವಶ್ಯಕತೆ ಪೂರೈಸಲು ಅನುದಾನ ಒದಗಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ತಿಳಿಸಿದರು.

ಅರೆ ವೈದ್ಯಕೀಯ ಕೌನ್ಸೆಲಿಂಗ್ ಕೇಂದ್ರ ಶುರು

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅರೆ ವೈದ್ಯಕೀಯ ಕೌನ್ಸೆಲಿಂಗ್ ಕೇಂದ್ರ ಶುರುವಾಗಿದೆ.
‘ಅರೆ ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೌನ್ಸೆಲಿಂಗ್ ಕೇಂದ್ರ ಆರಂಭಿಸಲಾಗಿದೆ. ಇದರಿಂದ ಕೌನ್ಸೆಲಿಂಗ್‍ಗಾಗಿ ಬೆಂಗಳೂರಿಗೆ ಹೋಗಿ ಬರಲು ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಖರ್ಚು ತಪ್ಪಲಿದೆ. ಸಮಯದ ಉಳಿತಾಯವೂ ಆಗಲಿದೆ’ ಎಂದುಬ್ರಿಮ್ಸ್ ನಿರ್ದೇಶಕ ಡಾ. ಚಂದ್ರಕಾಂತ ಚಿಲ್ಲರ್ಗಿ ಚಾಲನೆ ನೀಡಿದರು.

ಅರೆ ವೈದ್ಯಕೀಯ ಕೌನ್ಸೆಲಿಂಗ್ ಕೇಂದ್ರದ ಸಂಯೋಜಕ ಅಶೋಕ ಭೈರನಳ್ಳಿಕರ್ ಅಧ್ಯಕ್ಷತೆ ವಹಿಸಿದ್ದರು. ಬ್ರಿಮ್ಸ್‍ನ ಡಾ. ಕುಲಕರ್ಣಿ, ರಾಜಕುಮಾರ ಹೆಬ್ಬಾಳೆ, ಶಿವರಾಜಪ್ಪ, ಶಶಿಕಾಂತ ಹೊಸದೊಡ್ಡೆ, ರವೀಂದ್ರ ರಾಠೋಡ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.