ADVERTISEMENT

ದೇಶಿ ಸಂಸ್ಕೃತಿ ಉಳಿಸಲು ಜನಪದ ಜಾತ್ರೆಗಳು ಸಹಕಾರಿ

ವಿಧಾನ ಪರಿಷತ್‌ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 14:05 IST
Last Updated 18 ಸೆಪ್ಟೆಂಬರ್ 2022, 14:05 IST
ಬೀದರ್‌ನಲ್ಲಿ ಆಯೋಜಿಸಿದ್ದ ‘ನಮ್ಮೂರು ನಾವದಗೇರಿ ಜನಪದ ಜಾತ್ರೆ ಹಾಗೂ ಜಾನಪದ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿದರು
ಬೀದರ್‌ನಲ್ಲಿ ಆಯೋಜಿಸಿದ್ದ ‘ನಮ್ಮೂರು ನಾವದಗೇರಿ ಜನಪದ ಜಾತ್ರೆ ಹಾಗೂ ಜಾನಪದ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿದರು   

ಬೀದರ್‌: ‘ಆಧುನಿಕತೆ ಮತ್ತು ಯಾಂತ್ರೀಕರಣದ ಇಂದಿನ ಕಾಲದಲ್ಲಿ ಬಹುತೇಕ ಜನರು ಜನಪದ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಜನಪದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸುವಲ್ಲಿ ಜನಪದ ಉತ್ಸವ ಹಾಗೂ ಜಾತ್ರೆಗಳು ಪ್ರಮುಖ ಪಾತ್ರ ವಹಿಸುತ್ತಿವೆ’ ಎಂದು ವಿಧಾನ ಪರಿಷತ್ತಿನ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ, ನಾವದಗೇರಿಯ ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರುಣಾಮಯ ಯುವಕ ಸಂಘದ ಸಹಕಾರದಲ್ಲಿ ಆಯೋಜಿಸಿದ್ದ ‘ನಮ್ಮೂರು ನಾವದಗೇರಿ ಜನಪದ ಜಾತ್ರೆ ಹಾಗೂ ಜಾನಪದ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜನಪದ ಜಾತ್ರೆ ಅನೇಕ ಜನಪದ ಕಲಾ ತಂಡಗಳಿಗೆ ಹುರುಪು ನೀಡಿದೆ. ಎಲ್ಲ ಸಮುದಾಯದ ಕಲಾವಿದರೂ ಇಂತಹ ಜಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ಯುವಕರಲ್ಲಿ ರಾಷ್ಟ್ರೀಯ ಭಾವೈಕ್ಯ ಜಾಗೃತಗೊಳ್ಳುತ್ತದೆ’ ಎಂದು ತಿಳಿಸಿದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಕಲಬುರಗಿ ವಿಭಾಗದ ಸಹ ಪ್ರಮುಖ ಈಶ್ವರಸಿಂಗ್ ಠಾಕೂರ್ ಮಾತನಾಡಿ,‘ಶುಕ್ಲತೀರ್ಥ ಮಂದಿರದ ಆವರಣದಲ್ಲೂ ಝರಿ ಇರುವ ಕಾರಣ ತೀರ್ಥ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿ ಶುಕ್ಲ ಮುನಿ ತಪಸ್ಸು ಮಾಡಿದ ಸ್ಥಳ ಇದಾಗಿದೆ ಎನ್ನುವ ನಂಬಿಕೆ ಹಲವರಲ್ಲಿದೆ’ ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಆಡಳಿತ ಮಂಡಳಿ ಸದಸ್ಯ ಜಗನ್ನಾಥ ಹೆಬ್ಬಾಳೆ ಮಾತನಾಡಿ,‘ಬೀದರ್‌ನಲ್ಲಿ ಅಖಿಲ ಭಾರತ ಜನಪದ ಸಮ್ಮೇಳನ ಆಯೋಜಿಸಲು ಪರಿಷತ್ತಿನ ರಾಜ್ಯ ಆಡಳಿತ ಮಂಡಳಿ ಸಮಿತಿ ಒಪ್ಪಿಗೆ ನೀಡಿದೆ’ ಎಂದು ತಿಳಿಸಿದರು.

ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಬಿಜೆಪಿ ರಾಜ್ಯ ಕಾರಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಶಶಿ ಹೊಸಳ್ಳಿ, ಡೆನ್ ನೆಟ್‌ವರ್ಕ್‌ ಮಾಲೀಕ ರವೀಂದ್ರ ಸ್ವಾಮಿ, ವೈಬ್ಸ್ ಹೋಟೆಲ್‌ ಮಾಲೀಕ ರಾಜು ಮಾಳಗೆ, ರಾಜ್ಯ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಸಮುದಾಯ ಮುಖಂಡರಾದ ಭರತ ಶೆಟಕಾರ, ಪುಂಡಲಿಕರಾವ್ ಪಾಟೀಲ ಗುಮ್ಮಾ ಪಾಲ್ಗೊಂಡಿದ್ದರು.

ಎಸ್.ಬಿ.ಕುಚಬಾಳ ನಿರೂಪಿಸಿದರು. ಕಜಾಪ ಜಿಲ್ಲಾ ಸಂಚಾಲಕ ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಓಂಪ್ರಕಾಶ ಬಜಾರೆ ಪ್ರಾಸ್ತಾವಿಕ ಮಾತನಾಡಿದರು. ಸೇವಾ ಸಮಿತಿ ಅಧ್ಯಕ್ಷ ರಾಜಕುಮಾರ ಜಮಾದಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.