ADVERTISEMENT

ಬೀದರ್: ಕುರುಬರಿಗೆ ಜಿಲ್ಲೆಗೊಂದು ವಿಧಾನಸಭೆ ಟಿಕೆಟ್ ಕೊಡಿ

ಕಲ್ಯಾಣ ಕರ್ನಾಟಕ ಕುರುಬರ ರಾಜಕೀಯ ಜಾಗೃತಿ ಸಮಿತಿ ಅಧ್ಯಕ್ಷ ಹನುಮೇಶ ಕೊಡ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 8:34 IST
Last Updated 14 ನವೆಂಬರ್ 2021, 8:34 IST
ಹನುಮೇಶ ಕೊಡ್ಲಿ
ಹನುಮೇಶ ಕೊಡ್ಲಿ   

ಬೀದರ್‌: ಬರಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಕುರುಬ(ಗೊಂಡ) ಸಮುದಾಯದ ತಲಾ ಒಬ್ಬರು ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂದು ಕಲ್ಯಾಣ ಕರ್ನಾಟಕ ಕುರುಬರ(ಗೊಂಡ) ರಾಜಕೀಯ ಜಾಗೃತಿ ಹೋರಾಟ ಸಮಿತಿಯ ಅಧ್ಯಕ್ಷ ಹನುಮೇಶ ಕೊಡ್ಲಿ ರಾಯಚೂರು ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 41 ವಿಧಾನಸಭಾ ಕ್ಷೇತ್ರಗಳು ಇವೆ. ಇವುಗಳಲ್ಲಿ ಒಂದು ಕ್ಷೇತ್ರ ಮಾತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಕುರುಬ ಸಮುದಾಯವನ್ನು ರಾಜಕೀಯವಾಗಿ ಕಡೆಗಣಿಸುತ್ತ ಬರಲಾಗಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಬೇಡಿಕೆ ಮಂಡಿಸಿದರು.

ADVERTISEMENT

ಕುರುಬ ಸಮುದಾಯದಲ್ಲಿ ರಾಜಕೀಯ ಜಾಗೃತಿ ಮೂಡಿಸಲು ಹಾಗೂ ಯುವಕರನ್ನು ಒಗ್ಗೂಡಿಸಲು ಕಲ್ಯಾಣ ಕರ್ನಾಟಕ ಕುರುಬರ (ಗೊಂಡ) ರಾಜಕೀಯ ಜಾಗೃತಿ ಮತ್ತು ಹೋರಾಟ ಸಮಿತಿ ರಚಿಸಲಾಗಿದೆ. ರಾಜಕೀಯ ಪಕ್ಷಗಳು ಸಮಾಜದ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೀದರ್, ಕಲಬುರ್ಗಿ, ಯಾದಗಿರ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿ ಕನಕ ಭವನ ನಿರ್ಮಿಸಬೇಕು. ಕನಕ ಗುರುಪೀಠಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ಒದಗಿಸಬೇಕು. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಹಿಂದುಳಿದ ಜಾತಿಗಳ ಜನಗಣತಿ ವರದಿ ಅನುಷ್ಠಾನಕ್ಕೆ ತರಬೇಕು. ಈಗಾಗಲೇ ಸರ್ಕಾರದ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿರುವ ಕಲ್ಯಾಣ ಕರ್ನಾಟಕದ ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ಎಸ್.ಟಿ. ಗೊಂಡ ಸಿಂಧುತ್ವ ಪ್ರಮಾಣ ಪತ್ರ ಕೊಡಬೇಕು ಎಂದು ಆಗ್ರಹಿಸಿದರು.

ಕುರುಬ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಬಿರಾದಾರ, ಪಂಡಿತರಾವ್ ಚಿದ್ರಿ, ಬಾಬುರಾವ್ ಮಲ್ಕಾಪೂರ, ಮಾಳಪ್ಪ ಅಡಸಾರೆ, ವಿಜಯಕುಮಾರ ಕಾಶೆಂಪೂರ, ರವೀಂದ್ರ ಕಣಜೆ, ಸಮಿತಿಯ ಉಪಾಧ್ಯಕ್ಷ ಬೆಳಕೇರಿ ಶಿವಕುಮಾರ ಬೀದರ್, ನಿರ್ದೇಶಕರಾದ ಓಂಕಾರ ಗಣಾಪೂರ, ರಾಜಪ್ಪ ಎಸ್. ಧನಮಲ್ಲೆ, ದುರ್ಗೇಶ ಕ್ಯಾಟ್ನಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.